ದಿಲ್ಲಿ ಮದ್ಯ ನೀತಿ ಪ್ರಕರಣ: ಹಣ ಎಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದ ಸಚಿವೆ ಅತಿಶಿ
ಅತಿಶಿ | Photo: X \ @AtishiAAP
ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಹಾಗೂ ನ್ಯಾಯಾಲಯ ಅವರನ್ನು ಏಳು ದಿನಗಳ ಕಾಲ ಇಡಿ ಕಸ್ಟಡಿಗೆ ವಹಿಸಿದ ನಂತರ ಪ್ರತಿಕ್ರಿಯಿಸಿರುವ ಆಪ್ ನಾಯಕಿ ಹಾಗೂ ದಿಲ್ಲಿ ಸಚಿವೆ ಅತಿಶಿ, ಈ ಪ್ರಕರಣದ ಹಣದ ವಹಿವಾಟು ಸರಪಳಿಯು ಬಿಜೆಪಿಯತ್ತ ಸಾಗುತ್ತದೆ ಎಂದು ಹೇಳಿದ್ದಾರೆ.
“ಈ ಎರಡು ವರ್ಷಗಳಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದ ಹಣ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಏಳುತ್ತದೆ. ಆಪ್ನ ಯಾವುದೇ ನಾಯಕ, ಸಚಿವ ಅಥವಾ ಕಾರ್ಯಕರ್ತನಿಂದ ಹಣ ವಶಪಡಿಸಿಕೊಳ್ಳಲಾಗಿಲ್ಲ,” ಎಂದರು.
ಮುಂದುವರಿದು ಮಾತನಾಡಿದ ಅವರು “ಶರತ್ ಚಂದ್ರ ರೆಡ್ಡಿಯನ್ನು ನವೆಂಬರ್, 2022 ರಲ್ಲಿ ವಿಚಾರಣೆಗಾಗಿ ಕರೆಸಲಾಗಿತ್ತು. ತಾವು ಕೇಜ್ರಿವಾಲ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಅಥವಾ ಅವರ ಜೊತೆ ಮಾತನಾಡಿಲ್ಲ ಎಂದಿದ್ದರು. ಇದರ ಮರುದಿನವೇ ಈಡಿ ಅವರನ್ನು ಬಂಧಿಸಿತು. ಹಲವು ತಿಂಗಳು ಜೈಲಿನಲ್ಲಿದ್ದ ನಂತರ ಅವರು ಹೇಳಿಕೆ ಬದಲಾಯಿಸಿದರು. ತಾವು ಕೇಜ್ರಿವಾಲ್ ಭೇಟಿಯಾಗಿ ಅಬಕಾರಿ ನೀತಿ ಬಗ್ಗೆ ಮಾತನಾಡಿದ್ದಾಗಿ ಅವರು ಹೇಳಿದರು. ನಂತರ ಅವರಿಗೆ ಶೀಘ್ರದಲ್ಲೇ ಜಾಮೀನು ಲಭಿಸಿತು,” ಎಂದು ಆತಿಶಿ ಹೇಳಿದರು.
ಚುನಾವಣಾ ಬಾಂಡ್ ಮಾಹಿತಿ ಕುರಿತು ಮಾತನಾಡಿದ ಅವರು ರೆಡ್ಡಿ ಅವರ ಅರೊಬಿಂದೊ ಫಾರ್ಮ ಬಿಜೆಪಿಗೆ ಕೋಟಿಗಟ್ಟಲೆ ದೇಣಿಗೆ ನೀಡಿದೆ. ಎಪ್ರಿಲ್ 2021 ಹಾಗೂ ನವೆಂಬರ್ 2023 ನಡುವೆ ಈ ಸಂಸ್ಥೆ ರೂ 52 ಕೋಟಿ ಮೌಲ್ಯದ ಬಾಂಡ್ ಳನ್ನು ಖರೀದಿಸಿತ್ತು ಇವುಗಳಲ್ಲಿ ಶೇ 66 ಬಿಜೆಪಿಗೆ ಹೋಗಿದೆ ಎಂದರು.