ದಿಲ್ಲಿ | ತನ್ನ ಮನೆಯಲ್ಲಿ ಪಾಕಿಸ್ತಾನ ಪರ ಭಿತ್ತಿಪತ್ರಗಳನ್ನು ಅಂಟಿಸಿದ್ದ ವ್ಯಕ್ತಿಯ ಬಂಧನ
ಆರೋಪಿ ಮಾನಸಿಕ ಅಸ್ವಸ್ಥ ಎಂದ ಪೊಲೀಸರು
PC : x/@epanchjanya
ಹೊಸದಿಲ್ಲಿ: ತನ್ನ ಫ್ಲ್ಯಾಟ್ ನಲ್ಲಿ ಪಾಕಿಸ್ತಾನವನ್ನು ಹೊಗಳುವ ಭಿತ್ತಿಪತ್ರಗಳನ್ನು ಅಂಟಿಸಿದ್ದಾನೆ ಎಂಬ ದೂರನ್ನು ಆಧರಿಸಿ ರವಿವಾರ ದಿಲ್ಲಿ ಪೊಲೀಸರು ರೋಹಿಣಿಯಿಂದ ಓರ್ವನನ್ನು ಬಂಧಿಸಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಭಿತ್ತಿಪತ್ರಗಳನ್ನು ಆರೋಪಿಯ ಫ್ಲ್ಯಾಟ್ ನ ಗೋಡೆಯ ಮೇಲೆ ಅಂಟಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ರೋಹಿಣಿಯ ಅವಂತಿಕ ಸಿ-ಬ್ಲಾಕ್ ಪ್ರದೇಶದಲ್ಲಿರುವ ವ್ಯಕ್ತಿಯೊಬ್ಬ ಪಾಕಿಸ್ತಾನವನ್ನು ಬೆಂಬಲಿಸುವ ಕೆಲವು ಘೋಷಣೆಗಳನ್ನು ತನ್ನ ಫ್ಲ್ಯಾಟ್ ನ ಗೋಡೆಯ ಮೇಲೆ ಬರೆದಿದ್ದಾನೆ ಎಂಬ ಮಾಹಿತಿಯು ಸ್ಥಳೀಯರಿಂದ ನಮಗೆ ದೊರೆಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ತನ್ನ ಫ್ಲ್ಯಾಟ್ ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾನೆ” ಎಂದು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ವ್ಯಕ್ತಿಗೇನಾದರೂ ಪಾಕಿಸ್ತಾನ ಅಥವಾ ಇನ್ನಾವುದಾದರೂ ಗುಂಪಿನೊಂದಿಗೆ ಸಂಪರ್ಕವಿದೆಯೆ ಎಂಬ ಕುರಿತು ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲು ಬಂಧಿತ ವ್ಯಕ್ತಿಯ ಸಂಬಂಧಿಕರನ್ನು ಪೊಲೀಸರು ಸಂಪರ್ಕಿಸಿದ್ದಾರೆ.
ಈ ನಡುವೆ, ಆರೋಪಿಯ ನಿವಾಸದಿಂದ ಪೊಲೀಸರು ಆಕ್ಷೇಪಾರ್ಹ ಭಿತ್ತಿಪತ್ರ ಹಾಗೂ ಬ್ಯಾನರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
"ಪೊಲೀಸರ ಪ್ರಕಾರ ಆರೋಪಿಯು ಮುಸ್ಲಿಂ ಅಲ್ಲ. ಆತ ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ವಿಚಾರಣೆ ಪ್ರಗತಿಯಲ್ಲಿದೆ" ಎಂದು ಆಲ್ಟ್ ನ್ಯೂಸ್ ಸಹ-ಸ್ಥಾಪಕ ಮೊಹಮ್ಮದ್ ಝುಬೇರ್ ಹೇಳಿದ್ದಾರೆ.
According to Police, 'The accused is not a Muslim. He seems to be mentally challenged. Interrogation is going on'. https://t.co/BlR0mmDtQD
— Mohammed Zubair (@zoo_bear) August 4, 2024