ದಂತ ಚಿಕಿತ್ಸೆ ಪಡೆಯಲು ಭಾರತೀಯ ವಾಯುಪಡೆಯ ಕಮಾಂಡರ್ನಂತೆ ಸೋಗು ಹಾಕಿದ ವ್ಯಕ್ತಿಯ ಬಂಧನ!
ಸಾಂದರ್ಭಿಕ ಚಿತ್ರ (Photo: ANI)
ಹೊಸದಿಲ್ಲಿ: ನಕಲಿ ದಾಖಲೆಗಳನ್ನು ಬಳಸಿ ಪಾಲಂ ವಾಯುಪಡೆ ನಿಲ್ದಾಣ ಪ್ರವೇಶಿಸಿದ ದಿಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ವಾಯುಪಡೆಯ ವಿಂಗ್ ಕಮಾಂಡರ್ನಂತೆ ಸೋಗು ಹಾಕಿದ್ದ ವ್ಯಕ್ತಿಯನ್ನು ಭಾರಿ ಭದ್ರತಾ ವಲಯದಲ್ಲಿ ಬಂಧಿಸಲಾಗಿದೆ. ವಾಯುಪಡೆಯ ದಂತ ಚಿಕಿತ್ಸೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆತ ಹೀಗೆ ಸೋಗು ಹಾಕಿದ್ದಾನೆ ಎಂದು ವರದಿಯಾಗಿದೆ.
ಫೆಬ್ರವರಿ 21ರಂದು ಪಾಲಂ ವಾಯಪಡೆ ನಿಲ್ದಾಣವನ್ನು ಅನಧಿಕೃತವಾಗಿ ಪ್ರವೇಶಿಸಲು ಯತ್ನಿಸಿದ ಆರೋಪಿಯನ್ನು ಭದ್ರತಾ ಸಿಬ್ಬಂದಿಗಳು ಸೆರೆ ಹಿಡಿದರು. ಆತ ಮೊದಲ ಹಂತದ ಭದ್ರತಾ ತಪಾಸಣೆಯನ್ನು ವಂಚಿಸಲು ಯಶಸ್ವಿಯಾದರೂ, ಎರಡನೆ ಹಂತದ ಭದ್ರತಾ ವಲಯದ ಬಳಿ ಸಮೀಪಿಸುತ್ತಿದ್ದಂತೆಯೇ ಆತನನ್ನು ಬಂಧಿಸುವಲ್ಲಿ ವಾಯುಪಡೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ನೈರುತ್ಯ ದಿಲ್ಲಿಯ ಮಾಲಕ್ಗಂಜ್ ನಿವಾಸಿಯಾದ 39 ವರ್ಷ ವಯಸ್ಸಿನ ವಿನಾಯಕ್ ಚಡ್ಡಾ ಎಂದು ಗುರುತಿಸಲಾಗಿದ್ದು, ಆತನನ್ನು ವಾಯುಪಡೆ ಸಿಬ್ಬಂದಿಗಳು ತಮ್ಮ ವಶಕ್ಕೆ ಪಡೆದ ನಂತರ, ದಿಲ್ಲಿ ಪೊಲೀಸರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಆರೋಪಿ ಚಡ್ಡಾ ಬಳಿ ಐದು ಬಗೆಯ ನಕಲಿ ದಾಖಲೆಗಳು ಪತ್ತೆಯಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಿದಾಗ, ವಾಯುಪಡೆ ದಂತ ಚಿಕಿತ್ಸೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಾನು ನಕಲಿ ದಾಖಲೆಗಳನ್ನು ಬಳಸಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.