ದಿಲ್ಲಿ ಸಚಿವ ಕೈಲಾಶ್ ಗಹ್ಲೋಟ್ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಮಾಜಿ ಶಾಸಕ ಅನಿಲ್ ಝಾ ಎಎಪಿಗೆ ಸೇರ್ಪಡೆ
ಅರವಿಂದ್ ಕೇಜ್ರಿವಾಲ್ , ಅನಿಲ್ ಝಾ | PTI
ಹೊಸದಿಲ್ಲಿ: ದಿಲ್ಲಿ ಸಚಿವ ಕೈಲಾಶ್ ಗಹ್ಲೋಟ್ ಎಎಪಿ ಪಕ್ಷಕ್ಕೆ ರಾಜೀನಾಮೆ ಬೆನ್ನಲ್ಲೇ ಬಿಜೆಪಿಯ ಮಾಜಿ ಶಾಸಕ ಅನಿಲ್ ಝಾ ರವಿವಾರ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಅನಿಲ್ ಝಾ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಬಿಜೆಪಿಯ ಭದ್ರಕೋಟೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿರುವ ಪ್ರದೇಶದಲ್ಲಿ ಎಎಪಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.
ವಾಯವ್ಯ ದಿಲ್ಲಿಯ ಕಿರಾರಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಶಾಸಕರಾಗಿರುವ ಝಾ, ಬಿಜೆಪಿ ಪಕ್ಷದ ನಾಯಕತ್ವ ಮತ್ತು ನೀತಿಗಳಿಂದ ಅಸಮಾಧಾನಗೊಂಡು ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಹೇಳಿದ್ದಾರೆ. ಝಾ ಅವರ ಸೇರ್ಪಡೆಯು ಬಿಜೆಪಿ ಪಕ್ಷದ ಭದ್ರಕೋಟೆಯಾಗಿರುವ ಕಿರಾರಿ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಝಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಅನಿಲ್ ಝಾ ಅವರು ದಿಲ್ಲಿಯ ಪೂರ್ವಾಂಚಲಿಯ ದೊಡ್ಡ ನಾಯಕರಲ್ಲಿ ಓರ್ವರು. ಉತ್ತರಪ್ರದೇಶ ಮತ್ತು ಬಿಹಾರದಿಂದ ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ದಿಲ್ಲಿಗೆ ಬರುತ್ತಾರೆ. ಹಲವು ವರ್ಷಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅವರ ಬೇಡಿಕೆಗಳನ್ನು ನಿರ್ಲಕ್ಷಿಸಿದೆ. ನಾನು ಮುಖ್ಯಮಂತ್ರಿಯಿದ್ದಾಗ ಜನರ ಜೀವನ ಸುಧಾರಣೆಗೆ ಈ ಕಾಲೋನಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದ್ದೆ ಎಂದು ಹೇಳಿದ್ದಾರೆ.