ಪೊಲ್ಯೂಷನ್ ಸರ್ಟಿಫಿಕೇಟ್ ರಹಿತ ವಾಹನಗಳು | 164 ಕೋಟಿ ರೂ. ದಂಡ ವಿಧಿಸಿದ ದಿಲ್ಲಿ ಪೊಲೀಸರು!
PC : PTI
ಹೊಸದಿಲ್ಲಿ: ಅಕ್ಟೋಬರ್ 1ರಿಂದ ನವೆಂಬರ್ 22ರ ನಡುವೆ ಮಾನ್ಯತೆ ಹೊಂದಿರುವ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹೊಂದಿರದ ವಾಹನಗಳ ವಿರುದ್ಧ 1.64 ಲಕ್ಷ ಚಲನ್ ಗಳನ್ನು ಜಾರಿಗೊಳಿಸಿರುವ ರಾಷ್ಟ್ರ ರಾಜಧಾನಿ ದಿಲ್ಲಿ ಪೊಲೀಸರು, ಅವುಗಳಿಂದ 164 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ ಎಂದು ಸಂಚಾರಿ ಪೊಲೀಸರ ದತ್ತಾಂಶದಿಂದ ತಿಳಿದು ಬಂದಿದೆ.
ಈ ವರ್ಷ ಇಂತಹ ಅಪರಾಧವೆಸಗಿದ ಒಟ್ಟು 3.87 ಲಕ್ಷ ವಾಹನ ಮಾಲಕರ ವಿರುದ್ಧ ಚಲನ್ ಜಾರಿಗೊಳಿಸಲಾಗಿದೆ. ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹೊಂದಿಲ್ಲದ ವಾಹನಗಳಿಗೆ ವಿಧಿಸಲಾಗುವ ದಂಡದ ಮೊತ್ತ ರೂ. 10,000 ಆಗಿದೆ.
ಈ ಚಳಿಗಾಲದ ಋತುವಿನಲ್ಲಿ 10 ವರ್ಷದಷ್ಟು ಹಳೆಯದಾದ 6,531 ಪೆಟ್ರೋಲ್ ಚಾಲಿತ ವಾಹನಗಳು ಹಾಗೂ 15 ವರ್ಷದಷ್ಟು ಹಳೆಯದಾದ ಡೀಸೆಲ್ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಚಳಿಗಾಲದ ಋತುವಿನಲ್ಲಿ ಸೂಕ್ತ ಹೊದಿಕೆ ಇಲ್ಲದೆ ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯಗಳು ಹಾಗೂ ಅವಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ 872 ವಾಹನಗಳಿಗೆ ಪೊಲೀಸರು ದಂಡ ವಿಧಿಸಿದ್ದು, ಈ ವರ್ಷದ ನವೆಂಬರ್ 22ರವರೆಗೆ ಇಂತಹ ಒಟ್ಟು 1,413 ವಾಹನಗಳಿಗೆ ದಂಡ ವಿಧಿಸಿದ್ದಾರೆ.
ಈ ಅಪರಾಧಕ್ಕೆ ವಿಧಿಸಲಾಗುವ ದಂಡದ ಮೊತ್ತ 20,000 ರೂ. ಆಗಿದೆ.