ಕೇಜ್ರಿವಾಲ್ ರ ವಯೋವೃದ್ಧ ಪೋಷಕರನ್ನು ಪ್ರಶ್ನಿಸಲು ಹಿಂಜರಿದ ದಿಲ್ಲಿ ಪೊಲೀಸ್
PC ; PTI
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಆಪ್)ದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಪೋಷಕರನ್ನು ಪ್ರಶ್ನಿಸಲು ದಿಲ್ಲಿ ಪೊಲೀಸರು ಗುರುವಾರ ಕೇಜ್ರಿವಾಲ್ ರ ಮನೆಗೆ ಹೋಗಲಿಲ್ಲ. ಕೇಜ್ರಿವಾಲ್ ರ ಪೋಷಕರಿಗೆ ಬೆಂಬಲ ಸೂಚಿಸುವುದಕ್ಕಾಗಿ ಸಂಜಯ್ ಸಿಂಗ್ ಮತ್ತು ಆತಿಶಿ ಸೇರಿದಂತೆ ಹಿರಿಯ ಆಪ್ ನಾಯಕರು ದಿಲ್ಲಿ ಮುಖ್ಯಮಂತ್ರಿಯ ನಿವಾಸದಲ್ಲಿ ಜಮಾಯಿಸಿದ ಬಳಿಕ, ಪೊಲೀಸರು ವಿಚಾರಣೆಯನ್ನು ಮುಂದೂಡಿರುವ ವರದಿಗಳು ಹೊರಬಿದ್ದವು.
‘‘ನನ್ನ ವೃದ್ಧ ಮತ್ತು ಕಾಯಿಲೆಪೀಡಿತ ಪೋಷಕರನ್ನು ದಿಲ್ಲಿ ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸುತ್ತಾರೆ’’ ಎಂಬುದಾಗಿ ಅರವಿಂದ್ ಕೇಜ್ರಿವಾಲ್ ಬುಧವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದರು.
ಘಟನೆಗೆ ಸಂಬಂಧಿಸಿ ಕೇಜ್ರಿವಾಲ್ ರ ಕುಟುಂಬ ಸದಸ್ಯರನ್ನು ಪ್ರಶ್ನಿಸಲು ಮುಂದಿನ ದಿನಗಳಲ್ಲಿ ಪೊಲೀಸರು ಕೇಜ್ರಿವಾಲ್ ರ ಮನೆಗೆ ಹೋಗಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಮುಂದೆ, ಪೊಲೀಸರು ಸ್ವತಃ ಅರವಿಂದ್ ಕೇಜ್ರಿವಾಲ್ ರನ್ನೂ ಪ್ರಶ್ನಿಸಬಹುದು ಎಂದು ಅದು ಹೇಳಿದೆ.
ಗುರುವಾರ ಬೆಳಗ್ಗೆ, ಅರವಿಂದ್ ಕೇಜ್ರಿವಾಲ್ ತನ್ನ ಪೋಷಕರನ್ನು ವಿಚಾರಣೆ ಎದುರಿಸುವುದಕ್ಕಾಗಿ ತನ್ನ ಮನೆಯಲ್ಲಿನ ಕೋಣೆಯೊಂದಕ್ಕೆ ಕರೆದೊಯ್ಯುತ್ತಿರುವ ವೀಡಿಯೊವೊಂದನ್ನು ಆಮ್ ಆದ್ಮಿ ಪಕ್ಷವು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. ಬಳಿಕ, ನಾನು ಪತ್ನಿ ಮತ್ತು ಪೋಷಕರೊಂದಿಗೆ ಪೊಲೀಸರ ಆಗಮನಕ್ಕಾಗಿ ಕಾಯುತ್ತಿದ್ದೇನೆ ಎಂಬುದಾಗಿ ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘‘ನಿನ್ನೆ ಪೊಲೀಸರು ಕರೆ ಮಾಡಿ, ನನ್ನ ಪೋಷಕರನ್ನು ಪ್ರಶ್ನಿಸಲು ಸಮಯ ಕೋರಿದ್ದಾರೆ. ಆದರೆ, ಅವರು ಬುತ್ತಾರೋ ಇಲ್ಲವೋ ಎಂಬ ಮಾಹಿತಿಯನ್ನು ಅವರು ನಮಗೆ ಇನ್ನೂ ನೀಡಿಲ್ಲ’’ ಎಂದು ಅವರು ಹೇಳಿದರು.
ಪೊಲೀಸರನ್ನು ಬಳಸಿಕೊಂಡು ಬಿಜೆಪಿಯಿಂದ ಕೇಜ್ರಿವಾಲ್ ಪೋಷಕರ ಮೇಲೆ ದೌರ್ಜನ್ಯ: ಆಪ್ ಆರೋಪ
ಈ ನಡುವೆ, ಬಿಜೆಪಿಯು ಪೊಲೀಸರನ್ನು ಬಳಸಿಕೊಂಡು ಅರವಿಂದ್ ಕೇಜ್ರಿವಾಲ್ ರ ಪೋಷಕರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯು ಆರೋಪಿಸಿದೆ.
‘‘ಅರವಿಂದ್ ಕೇಜ್ರಿವಾಲ್ ಗೆ ಜಾಮೀನು ಸಿಕ್ಕ ಬಳಿಕ ಬಿಜೆಪಿ ಹುಚ್ಚನಂತಾಗಿದೆ. ಅವರು ಕೇಜ್ರಿವಾಲ್ ಮತ್ತು ಆಪ್ ವಿರುದ್ಧ ಪಿತೂರಿ ಹೂಡುತ್ತಿದ್ದಾರೆ ಮತ್ತು ದಾಳಿ ಮಾಡುತ್ತಿದ್ದಾರೆ. ಆದರೆ, ಇಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ರ ವೃದ್ಧ ತಂದೆ-ತಾಯಿಗೆ ಸಮನ್ಸ್ ನೀಡುವ ಮೂಲಕ ಅವರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ’’ ಎಂದು ಆಪ್ ನಾಯಕಿ ಆತಿಶಿ ಹೇಳಿದರು.
ಕೇಜ್ರಿವಾಲ್ ರ ತಂದೆಗೆ ಆಸರೆಯಿಲ್ಲದೆ ನಡೆಯಲು ಸಾಧ್ಯವಿಲ್ಲ ಮತ್ತು ಅವರ ತಾಯಿ ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಮರಳಿದ್ದಾರೆ ಎಂದು ಆಪ್ ನಾಯಕ ಸಂಜಯ್ ಸಿಂಗ್ ಹೇಳಿದರು.
‘‘ಬಿಜೆಪಿ ಈಗ ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದೆ. ಅದು ಕೇಜ್ರಿವಾಲ್ ರ ಕಾಯಿಲೆಪೀಡಿತ ವೃದ್ಧ ತಂದೆ-ತಾಯಿಗಳ ಮೇಲೆ ದೌರ್ಜನ್ಯ ನಡೆಸಲು ದಿಲ್ಲಿ ಪೊಲೀಸರನ್ನು ಉಪಯೋಗಿಸುತ್ತಿದೆ. ಅವರ ತಂದೆಗೆ 84 ವರ್ಷ. ಆಸರೆಯಿಲ್ಲದೆ ಅವರು ನಡೆಯಲಾರರು. ಅವರಿಗೆ ಕಿವಿಯೂ ಸರಿಯಾಗಿ ಕೇಳುವುದಿಲ್ಲ. ಕೇಜ್ರಿವಾಲ್ ರ ಬಂಧನದ ಎರಡು ದಿನಗಳ ಮೊದಲಷ್ಟೇ ಅವರ ತಾಯಿ ಆಸ್ಪತ್ರೆಯಿಂದ ಮರಳಿದ್ದರು. ಆಗ, ಅವರಿಗೆ ತನ್ನ ತಾಯಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದಕ್ಕೆ ಜನರು ಮತಗಳ ಮೂಲಕ ಪ್ರತಿಕ್ರಿಯಿಸುತ್ತಾರೆ’’ ಎಂದು ಅವರು ನುಡಿದರು.