ದಿಲ್ಲಿ: ಸರಿಯಾದ ಪೋಷಣೆ ಇಲ್ಲದೆ ಫ್ಲಾಟ್ ನಲ್ಲಿ ಕೂಡಿಹಾಕಲ್ಪಟ್ಟ ಬೀದಿನಾಯಿಗಳನ್ನು ರಕ್ಷಿಸಿದ ಪೊಲೀಸರು
ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಗ್ರೇಟರ್ ಕೈಲಾಶ್ ಪ್ರದೇಶದ ಮನೆಯೊಂದರಿಂದ 14 ಬೀದಿ ನಾಯಿಗಳನ್ನು ರಕ್ಷಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಗುರುವಾರ ಹೇಳಿದ್ದಾರೆ.
ಇದಲ್ಲದೆ, ಪೊಲೀಸರ ಪ್ರಕಾರ, ಮಹಿಳೆಯೊಬ್ಬರು ಕಳೆದ ಎರಡು ಮೂರು ವರ್ಷಗಳಿಂದ ಸರಿಯಾದ ಪೋಷಣೆ, ಆರೈಕೆ ಮತ್ತು ರಕ್ಷಣೆಯಿಲ್ಲದೆ ತನ್ನ ಫ್ಲ್ಯಾಟ್ ನಲ್ಲಿ ಬೀದಿ ನಾಯಿಗಳನ್ನು ಸಾಕುತ್ತಿದ್ದರು.
ಗ್ರೇಟರ್ ಕೈಲಾಶ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ನಂತರ ವಿಷಯ ಬೆಳಕಿಗೆ ಬಂದಿದೆ.
ಮಹಿಳೆಯ ಅಪಾರ್ಟ್ ಮೆಂಟ್ ನ ಸಂಪೂರ್ಣ ಮೆಟ್ಟಿಲು ಬೀದಿ ನಾಯಿಗಳ ಮೂತ್ರ ಹಾಗೂ ಮಲದಿಂದ ತುಂಬಿತ್ತು. ಅಪಾರ್ಟ್ ಮೆಂಟ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಲ್ಪವೂ ಸ್ವಚ್ಛತೆ ಕಂಡುಬಂದಿಲ್ಲ. ಮಹಿಳೆಯ ಫ್ಲ್ಯಾಟ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ದೂರು, ಐಪಿಸಿ ಸೆಕ್ಷನ್ 269 ಹಾಗೂ 291 ರ ಅಡಿಯಲ್ಲಿ ಎಫ್ಐಆರ್ ನಂ. 70/23 ರ ಪ್ರಕಾರ ಪ್ರಕರಣವನ್ನು ಪಿಎಸ್ ಜಿಕೆ -1 ನಲ್ಲಿ ದಾಖಲಿಸಲಾಗಿದೆ ಹಾಗೂ ತನಿಖೆ ಕೈಗೊಳ್ಳಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಚಿಕಿತ್ಸೆಗಾಗಿ ನಾಯಿಗಳನ್ನು ಎಸ್ಪಿಸಿಎ/ಎಂಸಿಡಿ ತಂಡಗಳಿಗೆ ಹಸ್ತಾಂತರಿಸುವಂತೆ ಮಹಿಳೆಗೆ ಪದೇ ಪದೇ ವಿನಂತಿಸಲಾಯಿತು. ಆದರೆ ಮಹಿಳೆಯು ಸಹಕರಿಸಲಿಲ್ಲ" ಎಂದು ಅಧಿಕಾರಿ ಹೇಳಿದರು.
"ರಕ್ಷಣಾ ಕಾರ್ಯಾಚರಣೆಯ ವೇಳೆ ಮಹಿಳೆಯ ಅಪಾರ್ಟ್ ಮೆಂಟ್ ನಲ್ಲಿ 14 ಬೀದಿ ನಾಯಿಗಳು ಶೋಚನೀಯ ಸ್ಥಿತಿಯಲ್ಲಿದ್ದವು. ಪಶುವೈದ್ಯರ ಸಮ್ಮುಖದಲ್ಲಿ ಅವುಗಳನ್ನು ರಕ್ಷಿಸಿ ಪ್ರಾಣಿಗಳ ವ್ಯಾನ್ ಗಳಲ್ಲಿ ಇರಿಸಲಾಯಿತು. ಸೂಕ್ತ ಕಾಳಜಿಯೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಪಶುವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ'' ಎಂದು ಅವರು ಹೇಳಿದರು.