ಆಪ್ ಸಾಕ್ಷ್ಯಚಿತ್ರ ‘ಅನ್ಬ್ರೇಕೆಬಲ್’ ಪ್ರದರ್ಶನಕ್ಕೆ ದಿಲ್ಲಿ ಪೊಲೀಸ್ ತಡೆ

ಅರವಿಂದ ಕೇಜ್ರಿವಾಲ್ | PTI
ಹೊಸದಿಲ್ಲಿ: ಅಗತ್ಯದ ಅನುಮತಿ ಇಲ್ಲವೆಂದು ಆಮ್ ಆದ್ಮಿ ಪಕ್ಷ (ಆಪ್)ದ ಸಾಕ್ಷ್ಯಚಿತ್ರ ‘ಅನ್ಬ್ರೇಕೆಬಲ್’ ಪ್ರದರ್ಶನವನ್ನು ದಿಲ್ಲಿ ಪೊಲೀಸರು ಶನಿವಾರ ಸ್ಥಗಿತಗೊಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್, ಆಪ್ನ ಕುರಿತಂತೆ ಒಂದು ಸಾಕ್ಷಚಿತ್ರವನ್ನು ನಿರ್ಮಿಸಲಾಗಿದೆ. ಇಂದು ನಾವು ಪತ್ರಕರ್ತರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದೆವು. ಆದರೆ, ದಿಲ್ಲಿ ಪೊಲೀಸರು ಇಂದು ಬೆಳಗ್ಗೆ ಅಲ್ಲಿಗೆ ತಲುಪಿದ್ದಾರೆ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನವನ್ನು ತಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದು ಖಾಸಗಿ ಪ್ರದರ್ಶನ. ಇದು ಚುನಾವಣಾ ಪ್ರಚಾರ ಅಲ್ಲ. ಇಲ್ಲಿ ಚುನಾವಣಾ ಬಾವುಟ ಇರಲಿಲ್ಲ. ಚುನಾವಣಾ ಭಾಷಣ ಅಥವಾ ಚುನಾವಣಾ ಪ್ರಚಾರ ಇರಲಿಲ್ಲ. ಬಿಜೆಪಿ ಈ ಸಾಕ್ಷ್ಯಚಿತ್ರಕ್ಕೆ ಹೆದರುವುದು ಯಾಕೆ ? ಎಂದು ಅವರು ಪ್ರಶ್ನಿಸಿದ್ದಾರೆ.
ಇದು ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನವಾಗಿತ್ತು. ನಾನು ಈ ಸಾಕ್ಷ್ಯಚಿತ್ರವನ್ನು ನೋಡಿಲ್ಲ. ಆದರೆ, ಇದು ಆಪ್ ನಾಯಕರನ್ನು ಜೈಲಿಗೆ ಕಳುಹಿಸಿದ ಕಥೆಯನ್ನು ತೋರಿಸುತ್ತದೆ ಹಾಗೂ ಬಿಜೆಪಿ ಸರಕಾರದ ಕಾನೂನು ಬಾಹಿರ, ಸಂವಿಧಾನ ಬಾಹಿರ ಕ್ರಮಗಳನ್ನು ಬಹಿರಂಗಪಡಿಸುತ್ತದೆ ಎಂದು ಹೇಳಬಲ್ಲೆ. ಅದಕ್ಕೆ ಬಿಜೆಪಿ ಹೆದರುತ್ತಿದೆ. ಸಾಕ್ಷ್ಯಚಿತ್ರ ಪ್ರದರ್ಶನ ನಿಲ್ಲಿಸಿರುವುದನ್ನು ನಾವು ಖಂಡಿಸುತ್ತೇವೆ. ಈ ಸಾಕ್ಷ್ಯಚಿತ್ರ ಪ್ರದರ್ಶಿಸಲು ನಮಗೆ ಅನುಮತಿ ಸಿಗಬಹುದೆಂದು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದು ಚುನಾವಣಾ ಕಾರ್ಯಕ್ರಮ ಅಲ್ಲ. ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಇಲ್ಲಿ ಪಕ್ಷದ ಚಿಹ್ನೆಯಾಗಲಿ, ಬಾವುಟವಾಗಲಿ ಇರಲಿಲ್ಲ. ನಾವು ಪೊಲೀಸರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆವು. ಇದು ಗೂಂಡಾಗಿರಿ ಹಾಗೂ ಸರ್ವಾಧಿಕಾರ ಎಂದು ಅವರು ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಅನುಮತಿ ಪಡೆದುಕೊಂಡಿಲ್ಲ. ಆದುದರಿಂದ ಇದು ಚುನಾವಣಾ ಮಾರ್ಗಸೂಚಿಗಳ ಉಲ್ಲಂಘನೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.