ದಿಲ್ಲಿ ಗಲಭೆ ಪ್ರಕರಣ: 19 ದೂರುಗಳನ್ನು ತಪ್ಪಾಗಿ ಒಟ್ಟುಗೂಡಿಸಿದ್ದಕ್ಕೆ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದಿಲ್ಲಿ ಗಲಭೆ ಪ್ರಕರಣದ 19 ದೂರುಗಳನ್ನು ಯಾವುದೇ ಆಧಾರವಿಲ್ಲದೆ ತಪ್ಪಾಗಿ ಜೊತೆಯಾಗಿಸಿದ್ದಕ್ಕೆ ದಿಲ್ಲಿಯ ನ್ಯಾಯಾಲಯವೊಂದು ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆಯಲ್ಲದೆ ಎಲ್ಲಾ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ.
ಇಪ್ಪತ್ತು ಕಡೆಗಳಲ್ಲಿ ನಡೆದ ಘಟನೆಗಳೆಲ್ಲವನ್ನೂಒಟ್ಟುಗೂಡಿಸಲಾಗಿತ್ತು ಹಾಗೂ ಒಂದು ಎಫ್ಐಆರ್ನಲ್ಲಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಇಬ್ಬರು ಪ್ರತ್ಯಕ್ಷದರ್ಶಿ ಸಾಕ್ಷಿಗಳೂ (ಪ್ರಾಥಮಿಕ ದೂರುದಾರ ಮತ್ತು ಹೆಡ್ ಕಾನ್ ಸ್ಟೇಬಲ್) ಅನ್ನು 19 ಘಟನೆಗಳ ಬಗ್ಗೆ ವಿಚಾರಿಸಲು ತನಿಖಾಧಿಕಾರಿಗಳು ಮನಸ್ಸು ಮಾಡಿಲ್ಲ. ಹತ್ತೊಂಬತ್ತು ಹೆಚ್ಚುವರಿ ದೂರುಗಳನ್ನು ಪರಿಶೀಲಿಸಲಾಗಿದೆಯೇ ಹೊರತು ತನಿಖೆ ನಡೆಸಲಾಗಿಲ್ಲ, ಹೀಗಿರುವಾಗ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿದರೆ ದೂರುದಾರರಿಗೆ ನ್ಯಾಯ ಒದಗಿಸಿದಂತಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಂದೀಪ್ ಕುಮಾರ್ ಎಂಬವರನ್ನು ಕರವಲ್ ನಗರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಗಲಭೆ ಮತ್ತು ಅಕ್ರಮ ಕೂಟದ ಆರೋಪದಿಂದ ಮುಕ್ತಗೊಳಿಸುವ ಸಂದರ್ಭ ನ್ಯಾಯಾಲಯ ಮೇಲಿನಂತೆ ಹೇಳಿದೆ.
ಶೋಕಿನ್ ಎಂಬವರು ತಮ್ಮ ಮನೆ ಮತ್ತು ಅಂಗಡಿಯನ್ನು ಗುಂಪೊಂದು 2020 ಗಲಭೆಗಳ ಸಂದರ್ಭ ಸುಟ್ಟು ಹಾಕಿತ್ತೆಂದು ದೂರಿದ್ದರು. ಮುಂದಿನ ವಿಚಾರಣೆ ವೇಳೆ ಹತ್ತಿರದ ಸ್ಥಳಗಳಲ್ಲಿ ನಡೆದ ಘಟನೆಗಳನ್ನೂ ಸೇರಿಸಿ 19 ಇತರ ದೂರುಗಳನ್ನೂ ತನಿಖಾಧಿಕಾರಿ ಇದರ ಜೊತೆಗೂಡಿಸಿದ್ದರು.
ಇದು ಸರಿಯಲ್ಲ ಎಂದು ಹೇಳಿರುವ ನ್ಯಾಯಾಲಯ ಎಲ್ಲಾ 19 ಪ್ರಕರಣಗಳನ್ನು ಪ್ರತ್ಯೇಕವಾಗಿ ತನಿಖೆ ನಡೆಸಬೇಕೆಂದು ಸೂಚಿಸಿದೆ.