ದಿಲ್ಲಿ ಸಿಸಿಟಿವಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ; ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಎಸಿಬಿ ಪ್ರಕರಣ

PC | PTI
ಹೊಸದಿಲ್ಲಿ: ಹಿಂದಿನ ಆಪ್ ಸರಕಾರದ 571 ಕೋಟಿ ರೂ. ಮೊತ್ತದ ಸಿಸಿಟಿವಿ ಅಳವಡಿಕೆ ಯೋಜನೆಯಲ್ಲಿ ನಡೆದಿದೆಯನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ದಿಲ್ಲಿ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ)ವು ಪ್ರಕರಣವನ್ನು ದಾಖಲಿಸಿಕೊಂಡಿದೆ.
ದಿಲ್ಲಿಯಾದ್ಯಂತ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಯನ್ನು ವಿಳಂಬಿಸಿದ್ದಕ್ಕಾಗಿ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್) ಗೆ ವಿಧಿಸಲಾಗಿದ್ದ 16 ಕೋಟಿ ರೂ. ದಂಡವನ್ನು ಲೋಕೋಪಯೋಗಿ ಸಚಿವರಾಗಿದ್ದ ಸತ್ಯೇಂದ್ರ ಜೈನ್ ರದ್ದುಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರು 7 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆಂದು ಆರೋಪಿಸಲಾಗಿದೆ.
ದಿಲಿಯಲ್ಲಿ ಸಿಸಿಟಿವಿ ಅಳವಡಿಕೆಯಲ್ಲಿ ವಿಳಂಬವು ಪುನಾವರ್ತನೆಗೊಂಡರೂ ಬಿಇಎಲ್ಗೆ ಹೆಚ್ಚುವರಿ 1.4 ಲಕ್ಷ ಸಿಸಿಟಿವಿ ಕ್ಯಾಮರಾ ಆಳವಡಿಕೆಯ ಗುತ್ತಿಗೆಯನ್ನು ವಹಿಸಲಾಗಿತ್ತು ಎಂದು ಎಸಿಬಿ ಆಪಾದಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಸತ್ಯೇಂದ್ರ ಜೈನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ಗಳಾದ 7 ಹಾಗೂ 13(1)(ಎ) ಹಾಗೂ ಭಾರತೀಯ ದಂಡಸಂಹಿತೆಯ ಸೆಕ್ಷನ್ 120ಬಿ (ಕ್ರಿಮಿನಲ್ ಸಂಚು) ಅಡಿ ಪ್ರಕರಣ ದಾಖಲಿಸಲಾಗಿದೆ.
ದಿಲ್ಲಿ ಸಿಸಿಟಿವಿ ಹಗರಣದ ಹಿನ್ನೆಲೆಯಲ್ಲಿ ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ್ ಅವರು ಆಮ್ ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ಮಾಜಿ ಸಚಿವ ಸತ್ಯೇಂದ್ರ ಜೈನ್ ಈ ಹಗರಣದ ಸೂತ್ರಧಾರಿಗಳೆಂದು ಅವರು ಆಪಾದಿಸಿದ್ದಾರೆ.