ದಿಲ್ಲಿ: ಕೊಂಚ ತಗ್ಗಿದ ಮಾಲಿನ್ಯ ಮಟ್ಟ: ಮುಂದುವರಿದ ಮಬ್ಬಿನ ವಾತಾವರಣ
Photo- PTI
ಹೊಸದಿಲ್ಲಿ: ಗಾಳಿಯ ಉತ್ತಮ ವೇಗದಿಂದ ದಿಲ್ಲಿ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಲಿನ್ಯ ಮಟ್ಟ ಕೊಂಚ ಇಳಿಕೆಯಾಗಿದೆ. ಆದರೂ ವಿಷಕಾರಿ ಪಿಎಂ 2.5 ಸಾಂದ್ರತೆಯು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಆರೋಗ್ಯಕರ ಮಿತಿಗಿಂತ 80 ಪಟ್ಟು ಹೆಚ್ಚಿದೆ.
ಸತತ ಐದನೇ ದಿನವಾದ ಶನಿವಾರ ಕೂಡ ದಟ್ಟ ವಿಷಕಾರಿ ಮಬ್ಬು ಆವರಿಸಿದ್ದು, ವಾಯು ಮಾಲಿನ್ಯ ಮಕ್ಕಳು ಹಾಗೂ ವೃದ್ಧರಲ್ಲಿ ಶ್ವಾಸಕೋಶ ಹಾಗೂ ಕಣ್ಣಿನ ಸಮಸ್ಯೆಗಳು ಹೆಚ್ಚಾಗಲು ಕಾರಣಗಬಲ್ಲದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಪಮಾನ ನಿರಂತರ ಇಳಿಕೆ, ಮಾಲಿನ್ಯವನ್ನು ಹಿಡಿದಿಟ್ಟುಕೊಳ್ಳುವ ಗಾಳಿಯ ನಿಧಾನಗತಿ, ಪಂಜಾಬ್, ಹರ್ಯಾಣದಾದ್ಯಂತ ಬೆಳೆ ತ್ಯಾಜ್ಯ ದಹನ ದಿಲ್ಲಿ-ಎನ್ಸಿಆರ್ನಲ್ಲಿ ಕಳೆದ ಒಂದು ವಾರದಿಂದ ವಾಯು ಗುಣಮಟ್ಟ ಇಳಿಕೆಯಾಗಲು ಕಾರಣವಾಗಿದೆ.
ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಾಂಕ (ಎಕ್ಯುಐ) ಅಕ್ಟೋಬರ್ 27 ಹಾಗೂ ನವೆಂಬರ್ 3ರ ನಡುವೆ 200 ಅಂಶಗಳಿಗೂ ಅಧಿಕ ಏರಿಕೆಯಾಗಿದೆ ಎಂಬುದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ದತ್ತಾಂಶ ತೋರಿಸಿದೆ. ಇದರೊಂದಿಗೆ ದಿಲ್ಲಿ ಶುಕ್ರವಾರ ಎಕ್ಯುಐ ‘ತೀವ್ರ ಪ್ಲಸ್’ ವಿಭಾಗಕ್ಕೆ ಪ್ರವೇಶಿಸಿತ್ತು.
ಆದರೆ, ಎಕ್ಯುಐ ಶುಕ್ರವಾರ ಸಂಜೆ 4 ಗಂಟೆಗೆ 468ರಿಂದ ಶನಿವಾರ ಬೆಳಗ್ಗೆ 6 ಗಂಟೆಗೆ 413ಕ್ಕೆ ಇಳಿಕೆಯಾಗುವುದರೊಂದಿಗೆ ಕೊಂಚ ಸುಧಾರಿಸಿದೆ.