ದೆಹಲಿ: ಕ್ರಿಕೆಟ್ ಪಂದ್ಯದ ನಡುವೆ ಮಾಲಿನ್ಯ ನಿಭಾಯಿಸಲು ಹರಸಾಹಸ
Photo: PTI
ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ಮಾಲಿನ್ಯ ಮಟ್ಟ ತೀವ್ರಕ್ಕೂ ಅಧಿಕ (ಸಿವಿಯರ್ ಪ್ಲಸ್) ಎಂಬ ಹಂತವನ್ನು ತಲುಪಿದ್ದು, ಕ್ರಿಕೆಟ್ ಪಂದ್ಯದ ನಡುವೆ ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಧುಮುಕಿದೆ. ವಾಯು ಗುಣಮಟ್ಟ ಸೂಚ್ಯಂಕ ಭಾನುವಾರ 454ನ್ನು ತಲುಪಿದ್ದು, ಇದರ ತಡೆಗೆ ಸಾಧ್ಯವಾದ ಎಲ್ಲ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ರಿಯಲ್ ಟೈಮ್ ಅಂಕಿ ಅಂಶಗಳ ಪ್ರಕಾರ ರಾಷ್ಟ್ರ ರಾಜಧಾನಿಯ ಎಕ್ಯೂಐ ಇಂದು 470ನ್ನು ತಲುಪಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿರುವ ಮಟ್ಟದ 20 ಪಟ್ಟು ಅಧಿಕ.
ಹಿಂಗಾರು ಹಂಗಾಮು ಆರಂಭಕ್ಕೆ ಮುನ್ನ ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ ಭತ್ತದ ಹುಲ್ಲನ್ನು ವ್ಯಾಪಕವಾಗಿ ಸುಡುತ್ತಿರುವುದು ದೆಹಲಿಯ ವಾಯುಗುಣಮಟ್ಟ ತೀವ್ರ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಹುಲ್ಲು ಸುಡುತ್ತಿರುವುದು ಮಾತ್ರ ದೆಹಲಿ ಮಾಲಿನ್ಯಕ್ಕೆ ಕಾರಣ. ಪಂಜಾಬ್ನಲ್ಲಿ ಸುಡುತ್ತಿರುವುದು ರಾಜಧಾನಿಯ ಎಕ್ಯೂಐ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವುದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಅವರ ವಾದ.
ಭಾರತದ ಹವಾಮಾನ ಇಲಾಖೆ ರಾಜಧಾನಿಯಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಇದು ಗಾಳಿಯಲ್ಲಿರುವ ಮಾಲಿನ್ಯಕಾರಕ ಅಂಶಗಳು ಕೆಳಕ್ಕೆ ಪತನಗೊಳ್ಳಲು ಕಾರಣವಾಗುತ್ತದೆ ಹಾಗೂ ವಾಯುಗುಣಮಟ್ಟ ಸುಧಾರಿಸಲು ಕಾರಣವಾಗುವ ಸಾಧ್ಯತೆ ಇದೆ. ಎಕ್ಯೂಐ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆಯನ್ನು ಸೋಮವಾರ ಆಯೋಜಿಸಿದ್ದು, ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ ಹೆಸರಿನ ನಾಲ್ಕು ಹಂತಗಳ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.