ದೆಹಲಿ ದುರಂತ: ಕೋಚಿಂಗ್ ಸೆಂಟರ್ ಗಳ ಮೇಲೆ ಎಂಸಿಡಿ ದಾಳಿ
Photo: PTI
ಹೊಸದಿಲ್ಲಿ: ನಗರದ ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್ ನ ಬೇಸ್ ಮೆಂಟ್ ನಲ್ಲಿದ್ದ ಗ್ರಂಥಾಲಯಕ್ಕೆ ಪ್ರವಾಹದ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಬೆನ್ನಲ್ಲೇ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ರಾಜೇಂದ್ರ ನಗರ ಪ್ರದೇಶದಲ್ಲಿರುವ 13 ನಾಗರಿಕ ಸೇವಾ ಸಂಸ್ಥೆಗಳ ಮೇಲೆ ದಾಳಿ ನಡೆಸಿ 13 ಬೇಸ್ ಮೆಂಟ್ ಗಳಿಗೆ ಬೀಗಮುದ್ರೆ ಹಾಕಿದ್ದಾರೆ.
ಪಾಲಿಕೆ ಅಧಿಕಾರಿಗಳ ತಂಡ ಹಳೆ ರಾಜೇಂದ್ರ ನಗರ ಪ್ರದೇಶಕ್ಕೆ ತೆರಳಿ, ಕೋಚಿಂಗ್ ಸೆಂಟರ್ ಗಳ ಬೇಸ್ ಮೆಂಟ್ ಅನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದುದನ್ನು ಪತ್ತೆ ಮಾಡಿದ್ದಾರೆ ಎಂದು ದೆಹಲಿ ಸರ್ಕಾರದ ಪ್ರಕಟಣೆ ಹೇಳಿದೆ.
ಭಾನುವಾರದ ಘಟನೆ ಬೆನ್ನಲ್ಲೇ ವಿದ್ಯಾರ್ಥಿಗಳು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಟ್ಟಡಗಳ ಬೈಲಾ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ಮೇಲೆ ಎಂಸಿಡಿ ದಾಳಿ ನಡೆಸಿದೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮತ್ತು ಕೇರಳದ ನವೀನ್ ದಲ್ವಿನ್ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್ ನಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದರು.
ಮಳೆ ನೀರಿನ ಚರಂಡಿ ವ್ಯವಸ್ಥೆ ಹಾಗೂ ಸುರಕ್ಷಾ ಕ್ರಮಗಳು ಇಲ್ಲದ್ದು ದುರಂತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಜತೆಗೆ ಕಟ್ಟಡದ ನಿಯಮಾವಳಿಗಳನ್ನು ಉಲ್ಲಂಘಿಸಿ ಬೇಸ್ ಮೆಂಟ್ ಗಳನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಕೂಡಾ ಪತ್ತೆಯಾಗಿದೆ.