ಪಿಸ್ತೂಲು ತೋರಿಸಿ ದಿಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಮಥುರಾ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ | PC : freepik.com
ಆಗ್ರಾ(ಉ.ಪ್ರ): ದಿಲ್ಲಿಯ ಮಹಿಳೆಯೋರ್ವಳು ಸಲ್ಲಿಸಿರುವ ದೂರಿನ ಆಧಾರದಲ್ಲಿ ಮಥುರಾದ ಬಿಜೆಪಿ ಪದಾಧಿಕಾರಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆರೋಪಿಯು ತನಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಪಿಸ್ತೂಲು ತೋರಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಹಿಳೆಯನ್ನು ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗುವುದು. ಪ್ರಕರಣದ ಕುರಿತು ವಿವರವಾದ ತನಿಖೆಯನ್ನು ನಡೆಸಲಾಗುತ್ತಿದೆ ಮತ್ತು ಅದರ ಪ್ರಕಾರ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೈವೇ ಪೋಲಿಸ್ ಠಾಣಾಧಿಕಾರಿ ಆನಂದ ಕುಮಾರ ಶಾಹಿ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿಯ ಕಿಸಾನ ಮೋರ್ಚಾದ ಮಾಜಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ನಾಯಕನಾಗಿರುವ ಆರೋಪಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ಈ ಆರೋಪಗಳು ಆಧಾರರಹಿತವಾಗಿವೆ ಮತ್ತು ತನ್ನ ವರ್ಚಸ್ಸಿಗೆ ಕಳಂಕವನ್ನುಂಟು ಮಾಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾನೆ.
‘ಫೇಸ್ಬುಕ್ ಮೂಲಕ ನನಗೆ ಆರೋಪಿಯ ಪರಿಚಯವಾಗಿತ್ತು ಮತ್ತು ನಾಲ್ಕು ವರ್ಷಗಳಿಂದಲೂ ಸಂವಹನ ನಡೆಸುತ್ತಿದ್ದೆವು. ಆರೋಪಿಯು ಎನ್ಜಿಒವೊಂದನ್ನು ನಡೆಸುತ್ತಿದ್ದು, ಸೆ.14ರಂದು ನನಗೆ ಕರೆ ಮಾಡಿ ಉದ್ಯೋಗ ಕೊಡಿಸುವುದಾಗಿ ತಿಳಿಸಿ ಮಥುರಾಕ್ಕೆ ಬರುವಂತೆ ಸೂಚಿಸಿದ್ದ. ನಾನು ನನ್ನ ಸ್ನೇಹಿತೆಯೊಂದಿಗೆ ಮಥುರಾಕ್ಕೆ ತೆರಳಿದ್ದು, ಆರೋಪಿ ಮತ್ತು ಆತನ ಸ್ನೇಹಿತ ನಮ್ಮನ್ನು ಗೋವರ್ಧನ ರಸ್ತೆಯ ಜಿಎಸ್ ಫಾರ್ಮ್ಗೆ ವಾಹನದಲ್ಲಿ ಕರೆದೊಯ್ದಿದ್ದರು. ನಾವು ಕೋಣೆಯೊಂದರಲ್ಲಿ ಮಾತುಕತೆ ಆರಂಭಿಸಿದ್ದೆವು. ಕೆಲಸಕ್ಕೆ ಸಂಬಂಧಿಸಿದಂತೆ ಚರ್ಚಿಸುವುದಿದೆ ಎಂದು ಹೇಳಿ ಆರೋಪಿ ನನ್ನ ಸ್ನೇಹಿತೆ ಮತ್ತು ತನ್ನ ಸ್ನೇಹಿತನನ್ನು ಹೊರಗೆ ಕಳುಹಿಸಿದ್ದ ಮತ್ತು ಕೋಣೆಯನ್ನು ಒಳಗಿನಿಂದ ಭದ್ರಪಡಿಸಿದ್ದ. ಪಿಸ್ತೂಲನ್ನು ತೋರಿಸಿ ನನ್ನ ಮೇಲೆ ಬಲಾತ್ಕಾರವೆಸಗಿದ್ದ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ. ಬಳಿಕ ಬಸ್ ನಿಲ್ದಾಣದಲ್ಲಿ ನನ್ನನ್ನು ಬಿಟ್ಟಿದ್ದ ಮತ್ತು ಮುಂದಿನ ಸಲ ಒಬ್ಬಳೇ ಬರುವಂತೆ ಸೂಚಿಸಿದ್ದ ’ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.
ಮರುದಿನ ತಾನು ಸ್ಥಳೀಯ ಪೋಲಿಸರಿಗೆ ತನಗಾದ ಅನ್ಯಾಯದ ಮಾಹಿತಿ ನೀಡಿದ್ದೆ,ಆದರೆ ಆರೋಪಿಯು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಅವರು ತನ್ನ ದೂರನ್ನು ಕಡೆಗಣಿಸಿದ್ದರು. ತಾನು ಹಲವಾರು ಬಾರಿ ಪೋಲಿಸ್ ಠಾಣೆಗೆ ಎಡತಾಕಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ತಾನು ದಿಲ್ಲಿಯಲ್ಲಿಯ ಅಧಿಕಾರಿಗಳ ಬಳಿ ತನ್ನ ಗೋಳು ತೋಡಿಕೊಂಡಿದ್ದೆ,ಕೊನೆಗೂ ಅಪರಾಧ ನಡೆದು ಮೂರು ತಿಂಗಳುಗಳ ಬಳಿಕ ಶುಕ್ರವಾರ ಮಥುರಾ ಪೋಲಿಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ವಿವರಿಸಿದ್ದಾರೆ.