ದಿಲ್ಲಿ: ಯಮನಾ ನದಿ ನೀರಿನ ಮಟ್ಟ ಇಳಿಕೆ

ಹೊಸದಿಲ್ಲಿ: ದಿಲ್ಲಿಯಲ್ಲಿ ಯುಮುನಾ ನದಿ ನೀರಿನ ಮಟ್ಟ ಶನಿವಾರ ಬೆಳಗ್ಗೆ ಇಳಿಕೆಯಾಗಿದೆ. ಆದರೆ, ಅಪಾಯದ ಮಟ್ಟದಲ್ಲೇ ಇದೆ. ದಿಲ್ಲಿಯಲ್ಲಿ ಯಮುನಾ ನದಿ ನೀರಿನ ಮಟ್ಟ ಶನಿವಾರ ಬೆಳಗ್ಗೆ 8 ಗಂಟೆಗೆ 207.58 ಮೀಟರ್ಗೆ ಇಳಿದಿದೆ. ಅದು ಗುರುವಾರ ರಾತ್ರಿ 8 ಗಂಟೆಗೆ 208.66 ಮೀಟರ್ ಇತ್ತು ಎಂದು ಕೇಂದ್ರ ಜಲ ಆಯೋಗ ಹೇಳಿದೆ.
ನದಿ ನೀರಿನ ಅಪಾಯ ಮಟ್ಟ 206.24 ಮೀಟರ್. ನೀರಿನ ಮಟ್ಟ ಇಳಿಕೆಯಾಗಲು ಆರಂಭವಾಗುತ್ತಿದ್ದರೂ ದಿಲ್ಲಿಯಲ್ಲಿ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿಯೇ ಇವೆ. ಓಖ್ಲಾ, ವಝೀರಾಬಾದ್ ಹಾಗೂ ಚಂದ್ರವಾಲ್ನಲ್ಲಿರುವ ಜಲ ಸಂರಕ್ಷಣಾ ಘಟಕಗಳು ಜಲಾವೃತವಾದುದರಿಂದ ಅದನ್ನು ದಿಲ್ಲಿ ಸರಕಾರ ಗುರುವಾರ ಮುಚ್ಚಿತ್ತು. ಓಖ್ಲಾ ಜಲ ಸಂರಕ್ಷಣೆ ಕೇಂದ್ರವನ್ನು ಶುಕ್ರವಾರ ತೆರೆದಿತ್ತು. ವಝೀರಾಬಾದ್ ಹಾಗೂ ಚಂದ್ರವಾಲ್ ಜಲ ಸಂರಕ್ಷಣಾ ಘಟಕಗಳು ರವಿವಾರ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ ಎಂದು ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ.
‘‘ನಾವು ನೆರೆ ನೀರು ಇಳಿಕೆಯಾಗಲು ಕಾಯುತ್ತಿದ್ದೇವೆ. ನೆರೆ ನೀರು ಇಳಿದ ಬಳಿಕವಷ್ಟೇ ಜಲ ಸಂರಕ್ಷಣೆ ಘಟಕದ ಸಲಕರಣೆಗಳನ್ನು ಸ್ವಚ್ಛಗೊಳಿಸಲು ಹಾಗೂ ಒಣಗಿಸಲು ಸಾಧ್ಯ. ಪ್ರಸಕ್ತ ದಿಲ್ಲಿ ಜಲ ಉತ್ಪಾದನೆಯ ಸುಮಾರು ನಾಲ್ಕನೇ ಒಂದು ಭಾಗ ತೊಂದರೆಗೊಳಗಾಗಿದೆ. ಜನರು ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ’’ ಎಂದು ದಿಲ್ಲಿ ಜಲ ಖಾತೆ ಸಚಿವ ಸೌರಭ್ ಭಾರದ್ವಾಜ್ ಅವರು ಶನಿವಾರ ಹೇಳಿದ್ದಾರೆ. ನದಿ ನೀರಿನ ಮಟ್ಟ ಇಳಿಕೆಯಾಗುತ್ತಿರುವುದರಿಂದ ಯಮುನಾ ನದಿ ಸೇತುವೆಯಲ್ಲಿ ರೈಲುಗಳ ಸಂಚಾರಕ್ಕೆ ವಿಧಿಸಲಾಗಿದ್ದ ವೇಗ ನಿರ್ಬಂಧವನ್ನು ದಿಲ್ಲಿ ಮೆಟ್ರೊ ರೈಲ್ ಕಾರ್ಪೊರೇಶನ್ ತೆಗೆದಿದೆ.
ಇದಕ್ಕಿಂತ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ನಾಲ್ಕು ಮೆಟ್ರೋ ಸೇತುವೆ ಮೂಲಕ ಹಾದು ಹೋಗುವ ರೈಲುಗಳ ವೇಗವನ್ನು ಗಂಟೆಗೆ 30 ಕಿ.ಮೀ. ವೇಗದ ಮಿತಿ ವಿಧಿಸಲಾಗಿತ್ತು. ಮಥುರಾ ರಸ್ತೆಯಿಂದ ರಿಂಗ್ ರೋಡ್ ಕ್ಯಾರೇಜ್ವೇವರೆಗೆ ವ್ಯಾಪಿಸಿದ ಭೈರೋನ್ ಮಾರ್ಗ್ನಲ್ಲಿ ವಿಧಿಸಲಾಗಿದ್ದ ವಾಹನಗಳ ಸಂಚಾರ ನಿರ್ಬಂಧವನ್ನು ತೆರವುಗೊಳಿಸಿಲ್ಲ ಎಂದು ದಿಲ್ಲಿ ಸಂಚಾರ ಪೊಲೀಸರು ಹೇಳಿದ್ದಾರೆ. ಐಟಿಒನಿಂದ ಲಕ್ಷ್ಮೀ ಮಾರ್ಗದ ವರೆಗಿನ ವಿಕಾಸ್ ಮಾರ್ಗ್, ಶಾಂತಿ ವನದಿಂದ ಗೀತಾ ಕಾಲನಿವರೆಗಿನ ನಿಶಾದ್ ರಾಜ ಮಾರ್ಗ್, ಚಾಂದ್ಗಿ ರಾಮ್ ಅಖಾರದಿಂದ ಮುಕರ್ಬಾ ಜೌಕ ಕ್ಯಾರೇಜ್ವೇ ಹಾಗೂ ಚಾಂದ್ಗಿ ರಾಮ್ ಅಖಾರದಿಂದ ಐಪಿ ಕಾಲೇಜು ವರೆಗಿನ ಮಾರ್ಗದಲ್ಲಿ ವಾಹನ ಸಂಚಾರ ಆರಂಭವಾಗಿದೆ.