1984ರ ಸಿಖ್ ಹತ್ಯಾಕಾಂಡದ ಸಂತ್ರಸ್ತರಿಗೆ 2014ರ ನಂತರವಷ್ಟೆ ನ್ಯಾಯದಾನ ದೊರೆತಿದೆ: ಅಮಿತ್ ಶಾ
ಅಮಿತ್ ಶಾ| Photo: PTI
ಹೊಸ ದಿಲ್ಲಿ: 19844ರಲ್ಲಿ ರಾಜಕೀಯ ಪ್ರೇರಿತವಾಗಿ ನಡೆದಿದ್ದ ಸಿಖ್ ಹತ್ಯಾಕಾಂಡದ ಸಂತ್ರಸ್ತರಿಗೆ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವಷ್ಟೆ ನ್ಯಾಯ ದೊರೆತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಿಲ್ಲಿ ಸಿಖ್ ಗುರುದ್ವಾಋ ನಿರ್ವಹಣಾ ಸಮಿತಿಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, 1984 ಗಲಭೆಗೆ ಸಂಬಂಧಿಸಿದಂತೆ 300 ಪ್ರಕರಣಗಳನ್ನು 2014ರ ನಂತರ ಮರುವಿಚಾರಣೆಗೆ ಒಳಪಡಿಸಿ, ಸಂತ್ರಸ್ತರ ಕುಟುಂಬಗಳಿಗೆ ರೂ. 5 ಲಕ್ಷ ಪರಿಹಾರವನ್ನು ನೀಡಲಾಯಿತು ಎಂದು ತಿಳಿಸಿದ್ದಾರೆ.
“1984ರ ಹತ್ಯಾಕಾಂಡವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಮತ್ತು ಅಂತಹ ಬರ್ಬರ ಹತ್ಯಾಕಾಂಡವು ರಾಜಕೀಯ ಪ್ರೇರಿತವಾಗಿತ್ತು. ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಆ ಗಲಭೆಯಲ್ಲಿನ ಯಾವ ಆರೋಪಿಗಳಿಗೂ ಶಿಕ್ಷೆಯಾಗಿರಲಿಲ್ಲ. ಯಾರೊಬ್ಬರ ಬಂಧನವೂ ಆಗಿರಲಿಲ್ಲ ಹಾಗೂ ಯಾರೊಬ್ಬರೂ 2014ರವರೆಗೆ ಒಂದು ದಿನವೂ ಜೈಲಿನಲ್ಲಿ ಕಳೆದಿರಲಿಲ್ಲ” ಎಂದು ಅವರು ಹೇಳಿದ್ದಾರೆ.
1984ರ ಗಲಭೆಯ ಕುರಿತು ಆಯೋಗಗಳನ್ನು ರಚಿಸಲಾಯಿತಾದರೂ, ಯಾವುದೇ ಪರಿಣಾಮಕಾರಿ ಫಲಿತಾಂಶ ಹೊರಬರಲೇ ಇಲ್ಲ ಎಂದು ಅವರು ಆರೋಪಿಸಿದ್ದಾರೆ.