ಹೆಚ್ಚುವರಿ ಸಾಲಕ್ಕೆ ಬೇಡಿಕೆ : ಕೇರಳಕ್ಕೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ನಕಾರ
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ : 2023-24ರ ಆರ್ಥಿಕ ವರ್ಷಕ್ಕೆ ಹೆಚ್ಚುವರಿ ಸಾಲ ನೀಡಬೇಕೆಂಬ ಕೇರಳ ಸರಕಾರದ ಅರ್ಜಿಗೆ ಸಂಬಂಧಿಸಿ ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಅದೇ ವೇಳೆ, ಕೇರಳದ ಸಾಲ ಪಡೆಯುವ ಅರ್ಹತೆಗೆ ಮಿತಿ ಹೇರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಸರಕಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವೊಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿತು.
ಸಾಲ ಪಡೆಯುವ ತನ್ನ ಅರ್ಹತೆಗೆ ಮಿತಿ ಹೇರುವ ನಿರ್ಧಾರವು ಆರ್ಥಿಕ ಒಕ್ಕೂಟ ವ್ಯವಸ್ಥೆಯ ತತ್ವಗಳ ಉಲ್ಲಂಘನೆಯಾಗಿದೆ ಎಂಬುದಾಗಿ ಡಿಸೆಂಬರ್ ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ರಾಜ್ಯ ಸರಕಾರ ಹೇಳಿತ್ತು.
ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ರಾಜ್ಯಕ್ಕೆ ಸಾಕಷ್ಟು ಪರಿಹಾರ ಸಿಕ್ಕಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿತು. ಈ ಪ್ರಕರಣದಲ್ಲಿ, ಸಂವಿಧಾನದ ವಿವರಣೆ ಒಳಗೊಂಡಿರುವುದರಿಂದ ಅದನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲು ನ್ಯಾಯಾಲಯ ನಿರ್ಧರಿಸಿತು.