ಲಡಾಖ್ ಗೆ ರಾಜ್ಯದ ಸ್ಥಾನಮಾನಕ್ಕಾಗಿ ಆಗ್ರಹ ; ಉಪವಾಸ ಮುಷ್ಕರ ವಾಪಸ್
Photo: scroll.in
ಲೇಹ್: ಲಡಾಖ್ ಗೆ ರಾಜ್ಯದ ಸ್ಥಾನಮಾನಕ್ಕಾಗಿ ಆಗ್ರಹಿಸಿ ಉಪವಾಸ ಮುಷ್ಕರಕ್ಕೆ ನೀಡಿದ್ದ ಕರೆಯನ್ನು ನಾಗರಿಕ ಸಮಾಜ ಗುಂಪುಗಳ ನಾಯಕರು ಸೋಮವಾರ ಹಿಂದೆಗೆದುಕೊಂಡಿದ್ದಾರೆ. ಉಪವಾಸ ಮುಷ್ಕರವು ಮಂಗಳವಾರ ಆರಂಭಗೊಳ್ಳಬೇಕಾಗಿತ್ತು.
ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರಕಾರವು ಒಪ್ಪಿದ ಹಿನ್ನೆಲೆಯಲ್ಲಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.
ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡಬೇಕು, ಸಂವಿಧಾನದ ಆರನೇ ಪರಿಚ್ಛೇದದಡಿ ರಕ್ಷಣೆ ನೀಡಬೇಕು, ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳನ್ನು ನೀಡಬೇಕು ಹಾಗೂ ಲಡಾಖ್ ಗೆ ಪ್ರತ್ಯೇಕ ಲೋಕಸೇವಾ ಆಯೋಗವನ್ನು ಒದಗಿಸಬೇಕು ಎಂಬ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುವುದಾಗಿ ಲಡಾಖ್ ನ ಬಿಜೆಪಿ ಮಾಜಿ ಸಂಸದ ತುಪ್ಸ್ತಾನ್ ಛೇವಾಂಗ್ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಘೋಷಿಸಿದ್ದರು.
ಸಂವಿಧಾನದ ಆರನೇ ಶೆಡ್ಯೂಲ್ ದೇಶದ ಬುಡಕಟ್ಟು ಪ್ರದೇಶಗಳಿಗೆ ಜಮೀನಿನ ರಕ್ಷಣೆ ಮತ್ತು ಸಾಂಕೇತಿಕ ಸ್ವಾಯತ್ತೆ ನೀಡುತ್ತದೆ. ಲಡಾಖ್ ನಲ್ಲಿ ಜನಸಂಖ್ಯೆಯ 97 ಶೇಕಡಕ್ಕಿಂತಲೂ ಅಧಿಕ ಮಂದಿ ಪರಿಶಿಷ್ಟ ಪಂಗಡಗಳಿಗ ಸೇರಿದವರಾಗಿದ್ದಾರೆ. ಕಾರ್ಗಿಲ್ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶವಾಗಿದೆ.