ಮಸೀದಿ ಕೆಡವಿ ಮಂದಿರ ನಿರ್ಮಾಣ ಒಪ್ಪಲು ಸಾಧ್ಯವಿಲ್ಲ: ಉದಯನಿಧಿ ಸ್ಟಾಲಿನ್
“ಡಿಎಂಕೆ ರಾಮ ಮಂದಿರದ ವಿರೋಧಿಯಲ್ಲ”
ಉದಯನಿಧಿ ಸ್ಟಾಲಿನ್ | Photo: PTI
ಚೆನ್ನೈ : ಅಯೋಧ್ಯೆ ರಾಮ ಮಂದಿರಕ್ಕೆ ತನ್ನ ಪಕ್ಷ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಮಸೀದಿ ಕೆಡವಿ ಮಂದಿರ ನಿರ್ಮಾಣ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಗುರುವಾರ ಹೇಳಿದ್ದಾರೆ.
ಡಿಎಂಕೆ ನಿರ್ದಿಷ್ಟ ಧರ್ಮ ಅಥವಾ ನಂಬಿಕೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಡಿಎಂಕೆಯ ಹಿರಿಯ ನಾಯಕ ದಿವಂಗತ ಎಂ. ಕರುಣಾನಿಧಿ ಪ್ರತಿಪಾದಿಸಿದ್ದರು ಎಂದು ಉದಯನಿಧಿ ಸ್ಟಾಲಿನ್ ಚೆನ್ನೈಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂದರ್ಭ ಹೇಳಿದರು.
‘‘ಅಲ್ಲಿ ದೇವಾಲಯ ಅಸ್ತಿತ್ವಕ್ಕೆ ಬರುವ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಮಸೀದಿ ಕೆಡವಿ ದೇವಾಲಯ ನಿರ್ಮಿಸುವುದನು ನಾವು ಒಪ್ಪಲು ಸಾಧ್ಯವಿಲ್ಲ’’ ಎಂದು 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವನ್ನು ಉಲ್ಲೇಖಿಸಿ ಅವರು ಹೇಳಿದರು.
‘‘ಆಧ್ಯಾತ್ಮ ಹಾಗೂ ರಾಜಕೀಯವನ್ನು ಬೆರೆಸಬಾರದು ಎಂದು ನಮ್ಮ ಖಜಾಂಚಿ (ಟಿ.ಆರ್. ಬಾಲು) ಈಗಾಗಲೇ ಪ್ರತಿಪಾದಿಸಿದ್ದಾರೆ’’ ಎಂದು ಉದಯ ನಿಧಿ ಸ್ಟಾಲಿನ್ ಹೇಳಿದರು.