ದಿಲ್ಲಿಯಲ್ಲಿ ದಟ್ಟ ಮಂಜು: ವಿಮಾನಗಳ ಹಾರಾಟ ವ್ಯತ್ಯಯ
ತೀವ್ರ ಚಳಿಯಿಂದ ನಡುಗುತ್ತಿರುವ ಉತ್ತರ ಭಾರತ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಶುಕ್ರವಾರ ದಿಲ್ಲಿ-ಎನ್ಸಿಆರ್ ಹಾಗೂ ಅದರ ಸುತ್ತಮುತ್ತಲಿನ ಪ್ರಾಂತ್ಯಗಳ ಮೇಲೆ ದಟ್ಟ ಮಂಜು ಕವಿದಿದ್ದು, ಉತ್ತರ ಭಾರತ ತೀವ್ರ ಚಳಿಯಿಂದ ನಡುಗುತ್ತಿದೆ. ಹಲವಾರು ಪ್ರದೇಶಗಳಲ್ಲಿ ಗೋಚರತೆ ಪ್ರಮಾಣ ಶೂನ್ಯಕ್ಕೆ ಕುಸಿದಿರುವುದರಿಂದ, ವಿಮಾನ ಹಾರಾಟ ಹಾಗೂ ರೈಲು ಸೇವೆ ವ್ಯತ್ಯಯಗೊಂಡಿದೆ. ರಸ್ತೆ ಸಂಚಾರ ನಿಧಾನ ಗತಿಯಲ್ಲಿದೆ. ಇದರೊಂದಿಗೆ, ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕವು ಗಂಭೀರ ಪ್ರವರ್ಗಕ್ಕೆ ಕುಸಿದಿದ್ದು, ಅತಿ ಕಡಿಮೆ ಮಟ್ಟವಾದ 409 ದಾಖಲಾಗಿದೆ.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆಯ ಪ್ರಮಾಣ ಶೂನ್ಯಕ್ಕೆ ಕುಸಿದಿರುವುದರಿಂದ, ದೊಡ್ಡ ಪ್ರಮಾಣದಲ್ಲಿ ವಿಮಾನಗಳ ಹಾರಾಟ ವ್ಯತ್ಯಯಗೊಂಡಿತು. ರಾಜಧಾನಿಯನ್ನು ದಟ್ಟ ಮಂಜು ಕವಿದಿರುವುದರಿಂದ, ಹವಾಮಾನ ಇಲಾಖೆಯು ನಗರಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ 210ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿದ್ದು, ಐದು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ವಿಮಾನಗಳ ಪೈಕಿ 72 ವಿಮಾನಗಳು ವಿಳಂಬಗೊಂಡಿದ್ದು, ಒಂದು ವಿಮಾನವನ್ನು ರದ್ದುಗೊಳಿಸಲಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 24 ನಿರ್ಗಮನ ಹಾಗೂ 17 ಆಗಮನ ವಿಮಾನಗಳು ಸೇರಿದಂತೆ ಒಟ್ಟು 41 ವಿಮಾನಗಳ ಹಾರಾಟ ವಿಳಂಬಗೊಂಡವು ಎಂದು ವಾಯು ಸಂಚಾರ ನಿಗಾ ವೇದಿಕೆ Flighttrader ಹೇಳಿದೆ.
ಈ ಪ್ರತಿಕೂಲ ವಾತಾವರಣದಿಂದ ವಿಮಾನ ನಿಲ್ದಾಣಗಳು, ರೈಲ್ವೆ ಮಾರ್ಗಗಳು ಹಾಗೂ ಹೆದ್ದಾರಿಗಳ ಮೇಲೆ ಪರಿಣಾಮ ಉಂಟಾಗಬಹುದು ಹಾಗೂ ಚಾಲನೆ ಕ್ಲಿಷ್ಟಕರವಾಗಿ, ಪ್ರಯಾಣದ ಅವಧಿಯು ವಿಳಂಬಗೊಳ್ಳಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.