ಮಣಿಪುರದಲ್ಲಿ ಕೇಂದ್ರ ಪಡೆಗಳ ನಿಯೋಜನೆ: ಎಸ್ಪಿ ಕಚೇರಿ ಮೇಲೆ ಗುಂಪು ದಾಳಿ
PC: x.com/abplive
ಗುವಾಹತಿ: ಹಿಂಸಾಪೀಡಿತ ಮಣಿಪುರದ ಕುಕಿ-ಝೋ ಗ್ರಾಮದಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಿದ್ದರಿಂದ ಆಕ್ರೋಶಗೊಂಡ ಗುಂಪು ಜಿಲ್ಲಾ ಪೊಲೀಸ್ ಕಚೇರಿಯ ಮೇಲೆ ಶುಕ್ರವಾರ ಸಂಜೆ ದಿಢೀರ್ ದಾಳಿ ನಡೆಸಿದ ಪ್ರಕರಣದಲ್ಲಿ ಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರು ಸೇರಿದಂತೆ ಹಲವು ಮಂದಿ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಗಾಯಗೊಂಡಿದ್ದಾರೆ.
ಎಸ್ಪಿ ಮನೋಜ್ ಪ್ರಭಾಕರ್ ಹಾಗೂ ಅವರ ತಂಡವನ್ನು ಗುರಿಮಾಡಿದ ಉದ್ರಿಕ್ತರ ಗುಂಪು ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿತು. ಇಂಫಾಲ ಪೂರ್ವ ಜಿಲ್ಲೆಯ ಗಡಿಭಾಗದ ಸಾಯಿಬೋಲ್ ಗ್ರಾಮದಲ್ಲಿ ನಿಯೋಜಿಸಿರುವ ಕೇಂದ್ರೀಯ ಪಡೆಗಳನ್ನು ಹಿಂಪಡೆಯಲು ಆಡಳಿತ ಯಂತ್ರ ನಿರಾಕರಿಸಿದ್ದರಿಂದ ಕುಪಿತಗೊಂಡ ಗ್ರಾಮಸ್ಥರು ದಾಳಿ ನಡೆಸಿದರು. ಎಷ್ಟು ಮಂದಿ ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ ಎನ್ನುವುದು ತಕ್ಷಣಕ್ಕೆ ತಿಳಿದು ಬಂದಿಲ್ಲ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿವೆ. 20 ತಿಂಗಳ ಜನಾಂಗೀಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಬಹಿರಂಗ ಕ್ಷಮೆಯಾಚಿಸಿ, ಸಂಘರ್ಷನಿರತ ಸಮುದಾಯಗಳು,"ಕ್ಷಮಿಸುವ ಮತ್ತು ಮರೆತು ಬಿಡುವ" ಮೂಲಕ ಶಾಂತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ ಬಳಿಕ ನಡೆದ ಮೊದಲ ಹಿಂಸಾಚಾರ ಇದಾಗಿದೆ.
ಡಿಸಂಬರ್ 31ರಂದು ಮಹಿಳೆಯೊಬ್ಬರ ಮೇಲೆ ಭದ್ರತಾ ಪಡೆಗಳು ಲಾಠಿಪ್ರಹಾರ ನಡೆಸಿದ್ದನ್ನು ವಿರೋಧಿಸಿ ಕುಕಿ-ಝೋ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬುಡಕಟ್ಟು ಏಕತಾ ಸಮಿತಿ ಜಿಲ್ಲೆಯಲ್ಲಿ 12 ಗಂಟೆಗಳ ಬಂದ್ ಗೆ ಕರೆ ನೀಡಿರುವ ಸಂದರ್ಭದಲ್ಲೇ ಈ ಹಿಂಸಾಚಾರ ಸಂಭವಿಸಿದೆ.