ಅಪರಿಚಿತ ಮೂಲಗಳಿಂದ ಖಾತೆಗಳಿಗೆ ಹಣ ಜಮಾ: ಬ್ಯಾಂಕ್ ಎದುರು ಗ್ರಾಹಕರ ನೂಕುನುಗ್ಗಲು
ಸಾಂದರ್ಭಿಕ ಚಿತ್ರ.| Photo: PTI
ಭುವನೇಶ್ವರ: ಅಪರಿಚಿತ ಮೂಲಗಳಿಂದ ಒಡಿಶಾ ರಾಜ್ಯದ ಕೇಂದ್ರಪರ ಜಿಲ್ಲೆಯ ಬಟಿಪಡದಲ್ಲಿನ ಕಳಿಂಗ ಗ್ರಾಮ್ಯ ಬ್ಯಾಂಕ್ ನ ಹಲವಾರು ಗ್ರಾಹಕರ ಖಾತೆಗಳಿಗೆ ಹಣ ಜಮೆಯಾದ ನಂತರ ಆ ಬ್ಯಾಂಕ್ ಎದುರು ಗುರುವಾರ ನೂಕುನುಗ್ಗಲುಂಟಾಗಿತ್ತು ಎಂದು deccanchronicle.com ವರದಿ ಮಾಡಿದೆ.
ತಮ್ಮ ಖಾತೆಗಳಿಗೆ ರೂ. 10,000ದಿಂದ ರೂ. 70,000ದವರೆಗೆ ಹಣ ಜಮೆಯಾಗಿದೆ ಎಂಬ ಮೊಬೈಲ್ ಸಂದೇಶಗಳು ಬರುತ್ತಿದ್ದಂತೆಯೆ ಬ್ಯಾಂಕ್ ಗ್ರಾಹಕರು ಬ್ಯಾಂಕ್ ಗೆ ಮುಗಿಬಿದ್ದಿದ್ದಾರೆ. ಹಲವಾರು ಗ್ರಾಹಕರು ತಮ್ಮ ಖಾತೆಗಳಿಗೆ ಯಾರು ಹಣ ಜಮೆ ಮಾಡಿದ್ದಾರೆ ಎಂದು ವಿಚಾರಿಸಲು ಬ್ಯಾಂಕ್ ಗೆ ದೌಡಾಯಿಸಿದ್ದರೆ, ಮತ್ತೆ ಕೆಲವು ಗ್ರಾಹಕರು ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯತೊಡಗಿದ್ದರು.
“ನನ್ನ ಖಾತೆಗೆ ಹಾಗೂ ಮತ್ತಿತರರ ಖಾತೆಗಳಿಗೆ ಹಣ ಜಮೆಯಾಗಿದೆ ಎಂಬ ಸುದ್ದಿ ತಿಳಿದು ನಾನು ಬ್ಯಾಂಕ್ ಗೆ ಬಂದಿದ್ದೇನೆ. ನನಗೆ ಯಾರು ಹಣ ಕಳಿಸಿದ್ದಾರೆ ಎಂಬ ಸಂಗತಿ ತಿಳಿದಿಲ್ಲ. ಇತರರು ರೂ. 10,000 ಮೊತ್ತವನ್ನು ಹಿಂಪಡೆದಿದ್ದರಿಂದ, ನಾನೂ ಕೂಡಾ ಹಣವನ್ನು ಹಿಂಪಡೆಯಲು ಬಂದಿದ್ದೇನೆ” ಎಂದು ಮಿನಾತಿ ಸಾಹು ಎಂಬ ಗ್ರಾಹಕರೊಬ್ಬರು ಹೇಳಿದ್ದಾರೆ.
ಗ್ರಾಹಕರು ಮಾತ್ರವಲ್ಲದೆ, ಬ್ಯಾಂಕ್ ಅಧಿಕಾರಿಗಳೂ ಕೂಡಾ ಯಾರು ಗ್ರಾಹಕರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ ಎಂಬ ಕುರಿತು ಗೊಂದಲಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಪ್ರತಾಪ್ ಪ್ರಧಾನ್, “ಗುರುವಾರದ ಬೆಳಗ್ಗೆಯಿಂದ ನಮ್ಮ ಕೆಲವು ಗ್ರಾಹಕರು ರೂ. 2,000ದಿಂದ ರೂ. 30,000ದವರೆಗೆ ಹಣ ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಯಾವ ಮೂಲದಿಂದ ಈ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ವಲ್ಪ ಮೊತ್ತವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮೂಲಕ ಜಮೆಯಾಗಿದೆ. ಇದು ಹೇಗಾಯಿತು ಎಂಬ ಬಗ್ಗೆ ಯಾವುದೇ ಅಂದಾಜಿಲ್ಲ” ಎಂದು ತಿಳಿಸಿದ್ದಾರೆ.
ಬ್ಯಾಂಕ್ ವ್ಯವಸ್ಥಾಪಕ ಪ್ರಧಾನ್ ಪ್ರಕಾರ, “ಹಣವನ್ನು ಹಿಂಪಡೆಯಲು ಬ್ಯಾಂಕ್ ಗೆ 200ರಿಂದ 250 ಮಂದಿ ಬಂದಿದ್ದರು. ಕೆಲವು ಗ್ರಾಹಕರ ಖಾತೆಗಳಿಗೆ ರೂ. 60,000ದಿಂದ ರೂ.80,000ದವರೆಗೆ ಹಣ ಜಮೆಯಾಗಿದೆ. ಈ ಹಣದ ಜಮೆ ಹೇಗಾಯಿತು ಎಂಬ ಅಂದಾಜು ನಮಗಿಲ್ಲ ಹಾಗೂ ಈ ಕುರಿತು ಪರಿಶೀಲಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.