ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ
Photo : PTI
ಹೊಸದಿಲ್ಲಿ: ಬಂಗಾಳ ಕೊಲ್ಲಿ ಹಾಗೂ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಇನ್ನೆರೆಡು ದಿನಗಳಲ್ಲಿ ಚಂಡಮಾರುತವಾಗಿ ಮಾರ್ಪಡಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತ ಡಿಸೆಂಬರ್ 4ರಂದು ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ತಲುಪಲಿದೆ ಎಂದು ಅದು ಮುನ್ನೆಚ್ಚರಿಕೆ ನೀಡಿದೆ.
ವಾಯುಭಾರ ಕುಸಿತ ವಾಯುವ್ಯದತ್ತ ಚಲಿಸಲಿದ್ದು, ಬಂಗಾಳ ಕೊಲ್ಲಿಯ ಮೇಲೆ ನಿಮ್ನ ಒತ್ತಡ ರೂಪುಗೊಳ್ಳಲಿದೆ ಹಾಗೂ ಚಂಡಮಾರುತ ‘ಮಿಯಾಚೌಂಗ್’ ಆಗಿ ಮಾರ್ಪಾಡಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ತಿಳಿಸಿದೆ.
ಈ ಚಂಡಮಾರುತದಿಂದಾಗಿ ಅಂಡಮಾನ್ ಹಾಗೂ ನಿಕೋಬಾರ್ ದ್ಪೀಪಗಳಲ್ಲಿ ಡಿಸೆಂಬರ್ 1ರಂದು ಅಲ್ಲಲ್ಲಿ ಭಾರೀ ಮಳೆ ಸುರಿಯಲಿದೆ. ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿ ವಲಯಗಳಲ್ಲಿ ಡಿಸೆಂಬರ್ 2ರಿಂದ 4ರ ವರೆಗೆ ಅಲ್ಲಲ್ಲಿ ತೀವ್ರತೆಯಿಂದ ಕೂಡಿದ ಭಾರೀ ಮಳೆ ಬೀಳಲಿದೆ ಎಂದು ಅದು ಹೇಳಿದೆ.
ಅದೇ ರೀತಿ ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ ಡಿಸೆಂಬರ್ 3 ಹಾಗೂ 4ರಂದು ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.