ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ದೇರಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಮತ್ತೆ ಪೆರೋಲ್
ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ (Photo: PTI)
ಹೊಸದಿಲ್ಲಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಮಂಗಳವಾರ 21 ದಿನಗಳ ಪೆರೋಲ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆತ ಹರ್ಯಾಣಾದ ರೋಹ್ಟಕ್ನಲ್ಲಿರುವ ಸುನರಿಯಾ ಜೈಲಿನಿಂದ ಹೊರಬಂದಿದ್ದು ಪೆರೋಲ್ ಅವಧಿಯಲ್ಲಿ ಆತ ಉತ್ತರ ಪ್ರದೇಶದ ಬಾಘ್ಪತ್ನಲ್ಲಿರುವ ದೇರಾ ಸಚ್ಚಾ ಸೌದಾ ಆಶ್ರಮದಲ್ಲಿರಲಿದ್ದಾನೆಂದು ತಿಳಿದು ಬಂದಿದೆ.
ಆತನಿಗೆ ಪೆರೋಲ್ ನೀಡುವುದನ್ನು ವಿರೋಧಿಸಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಪೆರೋಲ್ ಮಂಜೂರಾಗಿದ್ದು ಮಂಗಳವಾರ ಮುಂಜಾನೆ ಸುಮಾರು 6 ಗಂಟೆಗೆ ಆತ ಜೈಲಿನಿಂದ ಹೊರನಡೆದಿದ್ದಾನೆ.
ಆಶ್ರಮದ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆತನಿಗೆ 2017ರಲ್ಲಿ 20 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ ಪತ್ರಕರ್ತರೊಬ್ಬರ ಕೊಲೆ ಸಹಿತ ಎರಡು ಕೊಲೆ ಪ್ರಕರಣಗಳಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಗುರ್ಮೀತ್ ಸಿಂಗ್ ಗೆ ಪೆರೋಲ್ ಮಂಜೂರುಗೊಳಿಸಿದ್ದು ಇದು 10ನೇ ಬಾರಿ. ಈ ಹಿಂದೆ ಜನವರಿಯಲ್ಲಿ ಆತನಿಗೆ 50 ದಿನಗಳ ಪೆರೋಲ್ ಮಂಜೂರಾಗಿತ್ತು.
ಹರ್ಯಾಣ ಉತ್ತಮ ನಡತೆ ಕೈದಿಗಳ(ತಾತ್ಕಾಲಿಕ ಬಿಡುಗಡೆ) ಕಾಯಿದೆ 2022 ಪ್ರಕಾರ ಕೈದಿಯೊಬ್ಬ ಸಾಮಾನ್ಯ ಪೆರೋಲ್ಗೆ ಅರ್ಹನಾಗಿದ್ದಾನೆ. ಆದರೆ ಕೊಲೆ ಅಥವಾ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯಡಿ ಶಿಕ್ಷೆ ಅನುಭವಿಸುವವರಿಗೆ ಪೆರೋಲ್ಗೆ ಈ ಕಾಯಿದೆ ನಿರ್ಬಂಧ ಹೇರಿದೆ.