ಅಮಾನತುಗೊಂಡಿದ್ದ ಟಿಎಂಸಿ ಸಂಸದ ಒ'ಬ್ರಿಯಾನ್ ಗೆ ಸದನಕ್ಕೆ ಹಾಜರಾಗಲು ಅನುಮತಿ
ಡೆರೆಕ್ ಒʼಬ್ರಿಯಾನ್ (Video screengrab/ Sansad TV)
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿದ್ದಾರೆಂದು ಹೇಳಿ ಮಳೆಗಾಲದ ಅಧಿವೇಶನದಿಂದ ಸೋಮವಾರ ಅಮಾನತುಗೊಂಡಿದ್ದ ಟಿಎಂಸಿ ಸಂಸದ ಡೆರೆಕ್ ಒʼಬ್ರಿಯಾನ್ ಅವರಿಗೆ ಇಂದು (ಆ.8) ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸಲು ಅನುಮತಿಸಲಾಗಿದೆ.
ಆರಂಭದಲ್ಲಿ ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ ಅವರು ಡೆರೆಕ್ ಅವರು ಸದನದಿಂದ ಹೊರಹೋಗಬೇಕೆಂದು ಹೇಳಿದರೂ ಅವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮತದಾನಕ್ಕೆ ಹಾಕಿಲ್ಲದೇ ಇರುವುದರಿಂದ ಅವರು ಕಲಾಪದಲ್ಲಿ ಭಾಗವಹಿಸಬಹುದು ಎಂದು ನಂತರ ಹೇಳಿದರು.
ಡೆರೆಕ್ ಅವರನ್ನು ಇಂದಿನ ಕಲಾಪದಿಂದ ಅಮಾನತುಗೊಳಿಸುವ ನಿರ್ಣಯದ ಮೇಲೆ ಮತದಾನ ಅನುಮತಿಸದೆ ತಾವು “ದೂರದೃಷ್ಟಿಯ” ನಿರ್ಧಾರ ಕೈಗೊಂಡಿರುವುದಾಗಿ ಧನ್ಕರ್ ಹೇಳಿದರು.
ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ ಪ್ರಮೋದ್ ತಿವಾರಿ ಸಹಿತ ಹಲವು ಸದಸ್ಯರು ಡೆರೆಕ್ ಅವರ ಅಮಾನತು ಕುರಿತಂತೆ ಸಡಿಲ ನಿಲುವು ಹೊಂದುವಂತೆ ಸಭಾಪತಿಗಳಲ್ಲಿ ಕೇಳಿಕೊಂಡರು.
ಆಗ ಸಭಾಪತಿ ಪ್ರತಿಕ್ರಿಯಿಸಿ “ಒʼಬ್ರಿಯಾನ್ ಅವರನ್ನು ಸದನದಿಂದ ಈ ಅಧಿವೇಶನದಿಂದ ಅಮಾನತುಗೊಳಿಸಲಾಗಿದ್ದರೆ ಅವರನ್ನು ಸದನಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತಿತ್ತು ಎಂದು ಅಂದುಕೊಂಡಿರಾ?,” ಎಂದು ಕೇಳಿದರಲ್ಲದೆ ಯಾವುದೇ ಸದಸ್ಯನ ವಿರುದ್ಧ ಕ್ರಮಕೈಗೊಳ್ಳುವುದು ನೋವಿನ ಸಂಗತಿ ಎಂದರು.
“ನನ್ನ ನೋವನ್ನು ನಾನು ಕೊನೆಗಾಣಿಸಿದ್ದೇನೆ. ನಿರ್ಣಯವು ಯಶಸ್ವಿಯಾಗಿ ಅಂಗೀಕರಿಸಿದ್ದೇ ಆದಲ್ಲಿ ಅವರಿಗೆ ಸದನ ಪ್ರವೇಶಿಸಲು ಆಗುತ್ತಿರಲಿಲ್ಲ,” ಎಂದರು.
ದಿಲ್ಲಿ ಸೇವೆಗಳ ಮಸೂದೆ ಮೇಳಿನ ಚರ್ಚೆಯ ವೇಳೆ ಅಶಿಸ್ತಿನ ವರ್ತನೆ ತೋರಿದ್ದರೆಂದು ಅವರನ್ನು ಅಮಾನತುಗೊಳಿಸಲಾಗಿತ್ತು.