ಯುಪಿಐ ಯಶಸ್ವಿಯಾಗಿದ್ದರೂ ಈಗಲೂ ಹೆಚ್ಚುತ್ತಿರುವ ನಗದು ವಹಿವಾಟುಗಳು: ವರದಿ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ ಮೂಲಕ ವಹಿವಾಟುಗಳು ಶೇ.40ರಷ್ಟು ಹೆಚ್ಚಾಗಿದ್ದರೂ ನಗದು ಹಣಕ್ಕೆ ಬೇಡಿಕೆಯು ಕಡಿಮೆಯಾಗಿಲ್ಲ. ವಾಸ್ತವದಲ್ಲಿ ನಗದು ವಹಿವಾಟುಗಳು ಹೆಚ್ಚುತ್ತಲೇ ಇವೆ.
ಬ್ಯಾಂಕುಗಳಿಗೆ ಲಾಜಿಸ್ಟಿಕ್ಸ್ ಮತ್ತು ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುವ ಸಿಎಂಎಸ್ ಇನ್ಫೋ ಸಿಸ್ಟಮ್ಸ್ನ ಇತ್ತೀಚಿನ ವರದಿಯು ವಿತ್ತವರ್ಷ 23ರಲ್ಲಿ 1.35 ಕೋಟಿ ರೂ.ಗಳಷ್ಟಿದ್ದ ಪ್ರತಿ ಎಟಿಎಮ್ಗೆ ಮಾಸಿಕ ಸರಾಸರಿ ನಗದು ಹಿಂಪಡೆಯುವಿಕೆಯು ವಿತ್ತವರ್ಷ 24ರಲ್ಲಿ 1.43 ಕೋಟಿ ರೂ.ಗಳಿಗೆ ಏರಿಕೆಯಾಗಿದೆ (ಸುಮಾರು ಶೇ.6ರಷ್ಟು ಹೆಚ್ಚಳ) ಎಂದು ಹೇಳಿದೆ ಎಂದು financialexpress.com ವರದಿ ಮಾಡಿದೆ.
ಆರ್ಬಿಐ ದತ್ತಾಂಶಗಳ ಪ್ರಕಾರ,ಮಾಸಿಕ ಆಧಾರದಲ್ಲಿ ವಿತ್ತವರ್ಷ 23ಕ್ಕೆ ಹೋಲಿಸಿದರೆ ವಿತ್ತವರ್ಷ 24ರಲ್ಲಿ 12 ತಿಂಗಳುಗಳ ಪೈಕಿ 10 ತಿಂಗಳುಗಳಲ್ಲಿ ಎಟಿಎಮ್ಗಳಿಂದ ಸರಾಸರಿ ನಗದು ಹಿಂಪಡೆಯುವಿಕೆಯು ಏರಿಕೆಯಾಗಿದೆ. ಇದೇ ರೀತಿ ವಿತ್ತವರ್ಷ 21ರಿಂದ ವಿತ್ತವರ್ಷ 24ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಎಟಿಎಮ್ಗಳಿಂದ ಹಿಂಪಡೆದ ನಗದು ಹಣದ ಮೊತ್ತವು 28.78 ಲಕ್ಷ ಕೋಟಿ ರೂ.ಗಳಿಂದ 32.42 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ವಿತ್ತವರ್ಷ 20ರಲ್ಲಿ 2.10 ಲಕ್ಷಗಳಷ್ಟಿದ್ದ ಎಟಿಎಮ್ಗಳು ಮತ್ತು ನಗದು ಮರುಬಳಕೆ ಯಂತ್ರ (ಸಿಆರ್ಎಂ)ಗಳ ಸಂಖ್ಯೆ ವಿತ್ತವರ್ಷ 24ರಲ್ಲಿ 2.18 ಲಕ್ಷಕ್ಕೆ ಏರಿಕೆಯಾಗಿದೆ. ಈ ನಡುವೆ ವಿತ್ತವರ್ಷ 21ರಲ್ಲಿ 5.43 ಲಕ್ಷದಷ್ಟಿದ್ದ ಮೈಕ್ರೋ ಎಟಿಎಮ್ಗಳ ಸಂಖ್ಯೆ ವಿತ್ತವರ್ಷ 24ರಲ್ಲಿ 17.55 ಲ.ಕ್ಕೆ ಜಿಗಿದಿದೆ.
ಯುಪಿಐನಂತಹ ಹೊಸ ಪಾವತಿ ತಂತ್ರಜ್ಞಾನದ ಹೆಚ್ಚಿನ ಅಳವಡಿಕೆಯನ್ನು ಸರಕಾರವು ಉತ್ತೇಜಿಸುತ್ತಿರುವ ಸಮಯದಲ್ಲಿ ನಗದು ಹಿಂಪಡೆಯುವಿಕೆಗಳೂ ಹೆಚ್ಚುತ್ತಿವೆ. ಯುಪಿಐ ವಹಿವಾಟುಗಳ ಪ್ರಮಾಣ 2024 ಎಪ್ರಿಲ್ನಲ್ಲಿ 13.3 ಶತಕೋಟಿ (ವರ್ಷದಿಂದ ವರ್ಷಕ್ಕೆ ಶೇ.50ರಷ್ಟು ಹೆಚ್ಚಳ)ಗೆ ಏರಿದ್ದರೆ ವಹಿವಾಟುಗಳ ಮೌಲ್ಯ 19.6 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ (ವರ್ಷದಿಂದ ವರ್ಷಕ್ಕೆ ಶೇ.40ರಷ್ಟು ಹೆಚ್ಚಳ).
ಈಗಲೂ ನಗದು ಹಣವೇ ಮೆರೆಯುತ್ತಿದೆ, ಏಕೆ?
ಸಿಎಂಎಸ್ ಇನ್ಫೋ ಸಿಸ್ಟಮ್ಸ್ನ ಕ್ಯಾಷ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ ಅಧ್ಯಕ್ಷ ಅನುಷ್ ರಾಘವನ್ ಪ್ರಕಾರ, ಬೃಹತ್ ಮತ್ತು ಶ್ರೀಮಂತ ದೇಶಗಳಲ್ಲಿಯೂ ಡಿಜಿಟಲ್ ಪಾವತಿಗಳ ಅಪಾಯ, ಖರ್ಚುಗಳನ್ನು ನಿಯಂತ್ರಿಸುವ ಅಭ್ಯಾಸದಂತಹ ಅಂಶಗಳಿಂದಾಗಿ ಜನರು ನಗದು ಬಳಕೆಗೆ ಹೆಚ್ಚಿನ ಆದ್ಯತೆಯನ್ನು ಮುಂದುವರಿಸಿದ್ದಾರೆ.
ಭೌತಿಕ ಪಾವತಿ ಕಾರ್ಯವಿಧಾನವಾಗಿ ನಗದು ಹಣವು ತನ್ನ ಮೌಲ್ಯವನ್ನು ಬಲವಾಗಿ ಪ್ರದರ್ಶಿಸುತ್ತದೆ ಮತ್ತು ಜಾಗತಿಕವಾಗಿ ಗ್ರಾಹಕರೊಂದಿಗೆ ವಹಿವಾಟಿನಲ್ಲಿ ವಿಶ್ವಾಸವನ್ನು ನಿರ್ಮಿಸುತ್ತದೆ,ಇದನ್ನು ಇತರ ಯಾವುದೇ ಡಿಜಿಟಲ್ ಪಾವತಿಗಳು ಪೂರೈಸಲು ಸಾಧ್ಯವಿಲ್ಲ. ಯಾವುದೇ ಆರ್ಥಿಕತೆಯು ಹುಲುಸಾಗಿ ಬೆಳೆಯಲು ಪಾವತಿ ಪರಿಸರ ವ್ಯವಸ್ಥೆಯು ಎಲ್ಲ ರೀತಿಗಳ ವಹಿವಾಟುಗಳಿಗೆ ಅನುಮತಿಸುವುದು ಅನಿವಾರ್ಯವಾಗಿದೆ ಎಂದು ರಾಘವನ್ ಹೇಳಿದರು.
ಭಾರತದಲ್ಲಿ ಈಗಲೂ ಸುಮಾರು ಶೇ.60ರಷ್ಟು ವೈಯಕ್ತಿಕ ವೆಚ್ಚಗಳು ನಗದು ರೂಪದಲ್ಲಿಯೇ ಇವೆ. ಡಿಜಿಟಲ್ ಪಾವತಿಯು ಗಮನಾರ್ಹವಾಗಿ ಬೆಳೆದಿದ್ದರೂ ನಗದು ಬಳಕೆಯು ಕಡಿಮೆಯಾಗುವವರೆಗೂ ವ್ಯವಸ್ಥೆಯಲ್ಲಿನ ನಗದು ಹಣದ ಮೊತ್ತವು ಹಿಂದಿನ ವೇಗದಲ್ಲಿ ಅಲ್ಲದಿದ್ದರೂ ಬೆಳೆಯುತ್ತಲೇ ಇರುತ್ತದೆ ಎಂದು ವೀಸಾದ ಭಾರತ ಮತ್ತು ದಕ್ಷಿಣ ಏಶ್ಯಾ ಗ್ರೂಪ್ ಕಂಟ್ರಿ ಮ್ಯಾನೇಜರ್ ಸಂದೀಪ ಘೋಷ್ ಅಭಿಪ್ರಾಯಿಸಿದರು.
ಭಾರತದಲ್ಲಿ ಸುಮಾರು 30 ಕೋಟಿ ಜನರು ಯುಪಿಐ ಬಳಸುತ್ತಿದ್ದಾರೆ,ಇದೇ ವೇಳೆ ದೇಶದಲ್ಲಿ ಸುಮಾರು ಒಂದು ಶತಕೋಟಿ ಬ್ಯಾಂಕ್ ಖಾತೆಗಳಿವೆ. ಇದರರ್ಥ 70 ಕೋಟಿ ಜನರು ಈಗಲೂ ಯುಪಿಐ ಬಳಸುತ್ತಿಲ್ಲ ಮತ್ತು ಯುಪಿಐ ಬಳಸುವ 30 ಕೋಟಿ ಜನರಲ್ಲಿಯೂ ನೂರಕ್ಕೆ ನೂರರಷ್ಟು ವಹಿವಾಟುಗಳು ಡಿಜಿಟಲ್ ರೂಪದಲ್ಲಿ ನಡೆಯುತ್ತಿಲ್ಲ. ಅವರು ಯುಪಿಐ ಜೊತೆಗೆ ನಗದು ವಹಿವಾಟುಗಳನ್ನೂ ನಡೆಸುತ್ತಾರೆ ಎಂದು ಪ್ರಮುಖ ವೈಟ್ ಲೇಬಲ್ ಎಟಿಎಂ ನಿರ್ವಹಣಾ ಸಂಸ್ಥೆ ಇಂಡಿಯಾ 1 ಪೇಮೆಂಟ್ಸ್ನ ಎಂಡಿ ಮತ್ತು ಸಿಇಒ ಕೆ.ಶ್ರೀನಿವಾಸ ಹೇಳಿದರು.