ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ ಜಾರಿಗೊಳಿಸಿದ್ದು ದೇವೇಗೌಡ ಸರಕಾರ
ಎಚ್.ಡಿ.ದೇವೇಗೌಡ | PC : PTI
ಹೊಸದಿಲ್ಲಿ: ಮುಸ್ಲಿಮ್ ಸಮುದಾಯವನ್ನು ರಾಜ್ಯದ ಒಬಿಸಿ ಪಟ್ಟಿಗೆ ಸೇರಿಸುವ ಕಾಂಗ್ರೆಸ್ ನೇತೃತ್ವದ ಸರಕಾರದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸುತ್ತಿದ್ದಂತೆ 1995ರಲ್ಲಿ ಎಚ್.ಡಿ.ದೇವೇಗೌಡ ಸರಕಾರವು ಮೊದಲ ಬಾರಿಗೆ ಮುಸ್ಲಿಮರಿಗೆ ಮೀಸಲಾತಿಯನ್ನು ಜಾರಿಗೊಳಿಸಿತ್ತು ಎನ್ನುವುದನ್ನು ದಾಖಲೆಗಳು ತೋರಿಸುತ್ತಿವೆ. ಕುತೂಹಲಕಾರಿಯಾಗಿ, ದೇವೇಗೌಡರ ಜೆಡಿಎಸ್ ಈಗ ಬಿಜೆಪಿ ನೇತೃತ್ವದ ಎನ್ಡಿಎದ ಮಿತ್ರಪಕ್ಷವಾಗಿದೆ.
ಬುಧವಾರ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಕಾಂಗ್ರೆಸ್ ಪಕ್ಷವನ್ನು ‘ಒಬಿಸಿಗಳ ಅತ್ಯಂತ ದೊಡ್ಡ ಶತ್ರು’ಎಂದು ಬಣ್ಣಿಸಿದ ಮೋದಿ,ಕಾಂಗ್ರೆಸ್ ಹಿಂಬಾಗಿಲ ಮೂಲಕ ಎಲ್ಲ ಮುಸ್ಲಿಮ್ ಜಾತಿಗಳನ್ನು ಒಬಿಸಿಗಳೊಂದಿಗೆ ಸೇರಿಸುವ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಧರ್ಮಾಧಾರಿತ ಮೀಸಲಾತಿಯನ್ನು ನೀಡಿದೆ. ಸರಕಾರದ ಈ ಕ್ರಮವು ಒಬಿಸಿ ಸಮುದಾಯವನ್ನು ಮೀಸಲಾತಿಯ ಗಣನೀಯ ಭಾಗದಿಂದ ವಂಚಿತಗೊಳಿಸಿದೆ ಎಂದು ಹೇಳಿದ್ದರು.
ಇದಕ್ಕೆ ಚುರುಕಾಗಿ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ಕಾಂಗ್ರೆಸ್ ಹಿಂದುಳಿದ ವರ್ಗಗಳಿಂದ ಮೀಸಲಾತಿಯನ್ನು ಮುಸ್ಲಿಮರಿಗೆ ‘ವರ್ಗಾವಣೆ’ಗೊಳಿಸಿದೆ ಎನ್ನುವುದು ಅಪ್ಪಟ ಸುಳ್ಳು ಎಂದಿದ್ದಾರೆ.
ಮುಸ್ಲಿಮರಿಗೆ ಮೀಸಲಾತಿಯನ್ನು ಆರಂಭಿಸಿದ್ದು ಮಾಜಿ ಪ್ರಧಾನಿ ದೇವೇಗೌಡರು, ಹೀಗಾಗಿ ಅವರು ಈಗಲೂ ಮೀಸಲಾತಿಗೆ ಬೆಂಬಲವಾಗಿದ್ದಾರೆಯೇ ಅಥವಾ ನರೇಂದ್ರ ಮೋದಿಯವರಿಗೆ ಶರಣಾಗಿದ್ದಾರೆಯೇ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮುಸ್ಲಿಮರಿಗೆ ಮೀಸಲಾತಿ ಜಾರಿಗೊಳಿಸಿದ್ದಾಗಿ ಒಂದು ಕಾಲದಲ್ಲಿ ಜಂಬ ಕೊಚ್ಚಿಕೊಂಡಿದ್ದ ದೇವೇಗೌಡರು ಈಗಲೂ ತನ್ನ ನಿಲುವಿಗೆ ಬದ್ಧರಾಗಿದ್ದಾರೆಯೇ ಅಥವಾ ಮೋದಿಯವರಿಗೆ ಶರಣಾಗಿ ತನ್ನ ಹಿಂದಿನ ನಿಲುವನ್ನು ಬದಲಿಸುತ್ತಾರೆಯೇ? ಅವರು ಇದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಯ ಇತಿಹಾಸ :
1995ರಲ್ಲಿ ದೇವೇಗೌಡ ಸರಕಾರವು ಕರ್ನಾಟಕದಲ್ಲಿ ಒಬಿಸಿ ಕೋಟಾದೊಳಗೆ 2ಬಿ ಪ್ರವರ್ಗದಡಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ನೀಡಿತ್ತು.
ಕರ್ನಾಟಕ ಸರಕಾರವು 1995, ಫೆ.14ರ ತನ್ನ ಆದೇಶದಲ್ಲಿ, ಈ ನಿರ್ಧಾರವು ಚಿನ್ನಪ್ಪ ರೆಡ್ಡಿ ಆಯೋಗದ ವರದಿಯ ಪರಿಗಣನೆಗಳನ್ನು ಅನುಸರಿಸಿದೆ ಮತ್ತು ಒಟ್ಟಾರೆ ಮೀಸಲಾತಿಗಳನ್ನು ಶೇ.50ಕ್ಕೆ ಸೀಮಿತಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಕ್ಕೆ ಬದ್ಧವಾಗಿದೆ ಎಂದು ಪ್ರಮುಖವಾಗಿ ಹೇಳಿತ್ತು.
ರೆಡ್ಡಿ ಆಯೋಗವು ಮುಸ್ಲಿಮರನ್ನು ಒಬಿಸಿ ಪಟ್ಟಿಯಡಿ ವರ್ಗ 2ಕ್ಕೆ ಸೇರಿಸುವಂತೆ ಶಿಫಾರಸು ಮಾಡಿತ್ತು. ಇದಕ್ಕನುಗುಣವಾಗಿ ಅಂದಿನ ವೀರಪ್ಪ ಮೊಯ್ಲಿ ಸರಕಾರವು ತನ್ನ 1994 ಎ.20 ಮತ್ತು ಎ.25ರ ಆದೇಶದಲ್ಲಿ ‘ಅತ್ಯಂತ ಹಿಂದುಳಿದವರು’ ಎಂದು ಗುರುತಿಸಲಾದ 2ಬಿ ಪ್ರವರ್ಗದಲ್ಲಿ ಮುಸ್ಲಿಮರು, ಬೌದ್ಧರು ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಎಸ್ಸಿಗಳಿಗೆ ಶೇ.6ರಷ್ಟು ಮೀಸಲಾತಿಯನ್ನು ಪ್ರಕಟಿಸಿತ್ತು. ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದ್ದರೆ ಶೇ.2ರಷ್ಟನ್ನು ಇತರರಿಗೆ ನೀಡಲಾಗಿತ್ತು. ಮೀಸಲಾತಿಯನ್ನು 1994,ಅ.24ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿತ್ತು.
ಆದರೆ ಈ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. 1994, ಸೆ.9ರಂದು ಮಧ್ಯಂತರ ಆದೇಶವನ್ನು ಹೊರಡಿಸಿದ್ದ ಸರ್ವೋಚ್ಚ ನ್ಯಾಯಾಲಯವು ಎಸ್ಸಿ/ಎಸ್ಟಿಗಳು ಮತ್ತು ಒಬಿಸಿಗಳು ಸೇರಿದಂತೆ ಒಟ್ಟಾರೆ ಮೀಸಲಾತಿಗಳನ್ನು ಶೇ.50ಕ್ಕೆ ಸೀಮಿತಗೊಳಿಸುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಿತ್ತು.
ಆದರೆ ಆದೇಶವನ್ನು ಜಾರಿಗೊಳಿಸುವ ಮುನ್ನವೇ 1994, ಡಿ.11ರಂದು ರಾಜಕೀಯ ಬಿಕ್ಕಟ್ಟಿನಿಂದಾಗಿ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರಕಾರವು ಪತನಗೊಂಡಿತ್ತು.
ಅದೇ ದಿನ ಮುಖ್ಯಮಂತ್ರಿ ಗಾದಿಗೇರಿದ್ದ ದೇವೇಗೌಡರು 1995, ಫೆ.14ರಂದು ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪಿಗೆ ಅನುಗುಣವಾಗಿ ತಿದ್ದುಪಡಿಗಳೊಂದಿಗೆ ಹಿಂದಿನ ಸರಕಾರದ ಮೀಸಲಾತಿ ನಿರ್ಧಾರವನ್ನು ಜಾರಿಗೊಳಿಸಿದ್ದರು.
ಈ ಹಿಂದೆ 2ಬಿ ಎಂದು ವರ್ಗೀಕರಿಸಲ್ಪಟ್ಟಿದ್ದ ಕ್ರೈಸ್ತ ಮತ್ತು ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದ ಎಸ್ಸಿಗಳನ್ನು ಅನುಕ್ರಮವಾಗಿ ವರ್ಗ 1 ಮತ್ತು 2ಎ ಗುಂಪುಗಳಲ್ಲಿ ಮರುವರ್ಗೀಕರಿಸಲಾಗಿತ್ತು. 2ಬಿ ಕೋಟಾದಡಿ ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯ ಸರಕಾರದ ಉದ್ಯೋಗಳಲ್ಲಿ ಶೇ.4ರಷ್ಟು ಸ್ಥಾನಗಳನ್ನು ಮುಸ್ಲಿಮರಿಗೆ ಮೀಸಲಿರಿಸಲಾಗಿತ್ತು.
ಪ್ರಸ್ತುತ ಮೀಸಲಾತಿ ಸ್ಥಿತಿ :
2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ರಚನೆಗೊಂಡಿತ್ತು. ನಂತರ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಆದಾಗ್ಯೂ ಉಭಯ ಸರಕಾರಗಳ ಅಧಿಕಾರಾವಧಿಯಲ್ಲಿ ಈ ವರ್ಗೀಕರಣಕ್ಕೆ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿರಲಿಲ್ಲ.
2019ರಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಮರಳಿತ್ತು. 2023, ಮಾ.27ರಂದು ಅಂದಿನ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿಯವರು ಒಬಿಸಿಗಳಿಗೆ 3ಎ ಮತ್ತು 3ಬಿ ವರ್ಗಗಳ ರದ್ದತಿಯನ್ನು ಪ್ರಸ್ತಾವಿಸಿದ್ದರು. ಬದಲಿಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ತಲಾ ಶೇ.2ರಷ್ಟು ಮೀಸಲಾತಿಯೊಂದಿಗೆ 2ಸಿ ಮತ್ತು 2ಡಿ ಹೊಸ ವರ್ಗಗಳನ್ನು ಸೂಚಿಸಲಾಗಿತ್ತು.
ಬೊಮ್ಮಾಯಿ ಆಡಳಿತವು ಮುಸ್ಲಿಮರಿಗೆ 2ಬಿ ವರ್ಗವನ್ನು ರದ್ದುಗೊಳಿಸಲು ಮತ್ತು ಅವರನ್ನು ಆರ್ಥಿವಾಗಿ ದುರ್ಬಲ ವರ್ಗಗಳ ಶೇ.10ರ ಕೋಟಾದಲ್ಲಿ ಸೇರಿಸಲೂ ಪ್ರಸ್ತಾವಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿತ್ತು ಮತ್ತು ಕಾನೂನು ಸಮರದಲ್ಲಿ ಸಿಲುಕಿತ್ತು. ಪರಿಣಾಮವಾಗಿ ಪ್ರಸ್ತಾವವು ಅಲ್ಲಿಗೇ ಸ್ಥಗಿತಗೊಂಡಿತ್ತು.
ಮುಸ್ಲಿಮರಿಗೆ ಶೇ.4ರಷ್ಟು ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರಕಾರದ ನಿರ್ಧಾರವು ‘ಮೇಲ್ನೋಟಕ್ಕೆ ಅಸ್ಥಿರವಾಗಿದೆ ಮತ್ತು ದೋಷಪೂರಿತವಾಗಿದೆ ’ಎಂದು ಸರ್ವೋಚ್ಚ ನ್ಯಾಯಾಲಯವು 2023, ಎ.13ರಂದು ಹೇಳಿತ್ತು. ವಿವಾದಾತ್ಮಕ ಸರಕಾರಿ ಆದೇಶಕ್ಕೆ ಅನುಗುಣವಾಗಿ ಯಾವುದೇ ಹೊಸ ಪ್ರವೇಶಗಳು ಅಥವಾ ನೇಮಕಾತಿಗಳನ್ನು ಮಾಡಲಾಗುವುದಿಲ್ಲ ಎಂದು ಬೊಮ್ಮಾಯಿ ಸರಕಾರವು ಆಗ ಹೇಳಿತ್ತು.
ಪ್ರಸ್ತುತ ಸರ್ವೋಚ್ಚ ನ್ಯಾಯಾಲಯವು ಬಿಜೆಪಿ ಸರಕಾರದ ನಿರ್ಧಾರದ ಅನುಷ್ಠಾನವನ್ನು ತಡೆಹಿಡಿದಿದ್ದು, ಹಿಂದುಳಿದ ವರ್ಗಗಳ ಸಮುದಾಯಕ್ಕಾಗಿ ಮೀಸಲಾತಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ.