ನಾಗ್ಪುರ | ಅಂಬೇಡ್ಕರ್ ಪ್ರತಿಮೆ ಬಳಿ ‘ಜೈ ಶ್ರೀರಾಮ್’ ಘೋಷಣೆ ; ಫಡ್ನವೀಸ್ ವಿರುದ್ಧ ತೀವ್ರ ಆಕ್ರೋಶ
Photo: X/ @Dev_Fadnavis
ಮುಂಬೈ : ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅ.25ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ನಾಗ್ಪುರ ನೈರುತ್ಯ ಕ್ಷೇತ್ರದಿಂದ ತನ್ನ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಸಂವಿಧಾನ ಚೌಕ್ ಬಳಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಆಸೀನರಾಗಿದ್ದ ಫಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಹಿರಿಯ ಬಿಜೆಪಿ ನಾಯಕರ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯಿತ್ತು.
ಈ ನಾಯಕರು ತಮ್ಮ ಭಾಷಣಗಳನ್ನು ಆರಂಭಿಸುವ ಮುನ್ನವೇ ನೂರಾರು ಸಂಖ್ಯೆಯಲ್ಲಿದ್ದ ಬೆಂಬಲಿಗರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ವೇದಿಕೆಯಲ್ಲಿದ್ದ ಫಡ್ನವೀಸ್ ಮತ್ತು ಇತರರು ಬೆಂಬಲಿಗರತ್ತ ಕೈಬೀಸಿದ್ದರು. ಆದರೆ ಘೋಷಣೆಗಳನ್ನು ನಿಲ್ಲಿಸಲು ಪ್ರಯತ್ನಿಸಿರಲಿಲ್ಲ. ಪರಿಸ್ಥಿತಿಯು ಶೀಘ್ರ ನಿಯಂತ್ರಣ ತಪ್ಪಿದ್ದು, ಚೌಕ್ ಸುತ್ತಲಿನ ಬೇಲಿಗಳಿಗೆ ಹಾನಿಯಾಗಿತ್ತು.
ಈ ಘಟನೆಯ ಬಳಿಕ ನಾಗ್ಪುರದ ವಿವಿಧ ಜಾತಿವಿರೋಧಿ, ಅಂಬೇಡ್ಕರ್ವಾದಿ ಸಂಘಟನೆಗಳು ಪೋಲಿಸರನ್ನು ಸಂಪರ್ಕಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದವು. ಪೋಲಿಸರು ಈವರೆಗೆ ಎಫ್ ಐ ಆರ್ ದಾಖಲಿಸಿಕೊಂಡಿಲ್ಲ ಮತ್ತು ಅದಕ್ಕಾಗಿ ಸಮಯಾವಕಾಶವನ್ನು ಕೋರಿದ್ದಾರೆ.
ಸಂವಿಧಾನ ಚೌಕಕ್ಕೆ ನಾಗ್ಪುರ ಮತ್ತು ವಿವಿಧ ಜಿಲ್ಲೆಗಳಿಂದ ಬಹಳಷ್ಟು ಜನರು, ವಿಶೇಷವಾಗಿ ಅಂಬೇಡ್ಕರ್ ಜಯಂತಿ ದಿನವಾದ ಎ.14ಕ್ಕೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇಂತಹ ಸ್ಥಳವನ್ನು ತನ್ನ ರ್ಯಾಲಿಗೆ ಆಯ್ಕೆ ಮಾಡಿಕೊಂಡಿದ್ದ ಫಡ್ನವೀಸ್ ಉದ್ದೇಶವನ್ನು ಹಲವರು ಪ್ರಶ್ನಿಸಿದ್ದಾರೆ.
ನಗರದಲ್ಲಿ ಕೋಮು ಸೌಹಾರ್ದವನ್ನು ಕೆಡಿಸಲು ಉದ್ದೇಶಪೂರ್ವಕ ಪ್ರಯತ್ನವನ್ನು ಮಾಡಲಾಗಿತ್ತು ಎಂದು ಪೋಲಿಸರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿರುವ ಅಂಬೇಡ್ಕರ್ ವಾದಿ ರಾಕೇಶ್ ಧರ್ಗಾವೆ ಅವರು, ಎಸ್ಸಿ/ಎಸ್ಟಿ ಕಾಯ್ದೆಯಡಿ ಈ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.
PC : thewire.in
ಸಂವಿಧಾನ ಚೌಕ್ ದಲ್ಲಿ ನಡೆದಿದ್ದನ್ನು ಕಡೆಗಣಿಸುವಂತಿಲ್ಲ. ಅಂಬೇಡ್ಕರ್ ರ ಅನೇಕ ವಿಷಯಗಳ ಸಂಕೇತವಾಗಿದ್ದಾರೆ. ಹಿಂದು ಧರ್ಮವನ್ನು ತೊರೆದು ಬೌದ್ಧಧರ್ಮವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಅವರು 22 ಪ್ರತಿಜ್ಞೆಗಳನ್ನು ಮಾಡಿದ್ದರು. ‘ನಾನು ರಾಮ ಮತ್ತು ಕೃಷ್ಣರಲ್ಲಿ ನಂಬಿಕೆಯನ್ನು ಹೊಂದಿಲ್ಲ’ ಎನ್ನುವುದು ಇವುಗಳಲ್ಲೊಂದಾಗಿತ್ತು. ಇಂತಹ ಸ್ಥಳದಲ್ಲಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲು ಗುಂಪು ನಿರ್ಧರಿಸಿದರೆ ಇಂತಹ ಘೋಷಣೆಗಳ ಹಿಂದಿನ ಉದ್ದೇಶವನ್ನು ಯಾರೂ ಊಹಿಸಬಹುದು ಎಂದು ನಾಗ್ಪುರದ ಅಂಬೇಡ್ಕರ್ ವಾದಿ ವಸುಬಂಧು ಮಾನ್ಕೆ ಹೇಳಿದರು.
ಈ ಘಟನೆ ನಡೆದ ಬಳಿಕ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸದಂತೆ ಪೋಲಿಸರು ಪ್ರದೆಶದಲ್ಲಿ ಗಸ್ತು ನಿರ್ವಹಿಸುತ್ತಿದ್ದಾರೆ. ಬೇಲಿಗಳಿಗೆ ಉಂಟಾಗಿದ್ದ ಹಾನಿಯನ್ನು ಸರಿಪಡಿಸಲಾಗಿದೆ.
ಪ್ರತಿವರ್ಷ ಸಾವಿರಾರು ಅಂಬೇಡ್ಕರ್ ವಾದಿಗಳು ಸಂವಿಧಾನ ಚೌಕ್ನಲ್ಲಿ ಸೇರುತ್ತಾರೆ. ಆದರೆ ಒಂದೇ ಒಂದು ಟೈಲ್ ಗೂ ಹಾನಿಯಾಗುವುದಿಲ್ಲ. ಆದರೆ ಈಗ ಬಿಜೆಪಿ ನಾಯಕರ ಒಂದೇ ಭೇಟಿಯ ಬಳಿಕ ಪೋಲಿಸರು ಪ್ರದೇಶದಲ್ಲಿ ಬಂದೋಬಸ್ತ್ ಏರ್ಪಡಿಸುವಂತಾಗಿದೆ ಮತ್ತು ರಿಪೇರಿಯನ್ನು ಮಾಡಿಸುವಂತಾಗಿದೆ ಎಂದು ಭಾರತೀಯ ಬೌದ್ಧಸಭಾದ ಹಿರಿಯ ಸದಸ್ಯೆ ಶಿಲ್ಪಾ ನಾಗದೇವತಾ ಹೇಳಿದರು.
ನಾಗ್ಪುರ ಐತಿಹಾಸಿಕ ಮಹತ್ವವನ್ನು ಹೊಂದಿದೆ. 1956ರಲ್ಲಿ ಲಕ್ಷಾಂತರ ದಲಿತರು ಇಲ್ಲಿ ಅಂಬೇಡ್ಕರ್ ಉಪಸ್ಥಿತಿಯಲ್ಲಿ ಹಿಂದುಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸೇರಿದ್ದರು. ಕುತೂಹಲಕಾರಿಯಾಗಿ ಆರೆಸ್ಸೆಸ್ ನ ಮುಖ್ಯ ಕಚೇರಿಯೂ ಇಲ್ಲಿಯೇ ಇದ್ದು, ಇದು ಆಗಾಗ್ಗೆ ಸೈದ್ಧಾಂತಿಕ ಸಂಘರ್ಷಗಳಿಗೆ ಕಾರಣವಾಗುತ್ತಿದೆ.
ಸೌಜನ್ಯ : thewire.in