ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ದೇವೇಂದ್ರ ಫಡ್ನವಿಸ್-ಅಜಿತ್ ಪವಾರ್ ನಡುವೆ ವಾಗ್ಯುದ್ಧ!
ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ | PTI
ಮುಂಬೈ: 'ಬಟೇಂಗೆ ತೋ ಕಟೆಂಗೆ' ಎಂಬ ಘೋಷಣೆಗೆ ಮಹಾರಾಷ್ಟ್ರದಲ್ಲಿ ಅವಕಾಶವಿಲ್ಲ ಎಂಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಗೆ ಮತ್ತೊಬ್ಬ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಿತ್ರ ಪಕ್ಷದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನವಿಸ್, ಘೋಷಣೆ ಬಗೆಗಿನ ಅಜಿತ್ ಪವಾರ್ ತಿಳಿವಳಿಕೆಯು ತಮ್ಮ ಮಾಜಿ ಮಿತ್ರ ಪಕ್ಷಗಳಿಂದ ಪ್ರಭಾವಿತಗೊಂಡಿದೆ ಎಂದು ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಸಮಾವೇಶವೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಜೆಪಿಯ ತಾರಾ ಪ್ರಚಾರಕ ಯೋಗಿ ಆದಿತ್ಯನಾಥ್, “ಬಟೇಂಗೆ ತೋ ಕಟೆಂಗೆ” ಎಂಬ ವಿವಾದಾತ್ಮಕ ಘೋಷಣೆಯನ್ನು ಪ್ರಚಾರ ಮಾಡಿದ್ದರು. ಈ ಘೋಷಣೆಯಲ್ಲಿ ಕೋಮುವಾದಿ ಧ್ವನಿ ಅಡಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಇದಕ್ಕೂ ಮುನ್ನ, ಈ ತಿಂಗಳ ಆರಂಭದಲ್ಲಿ “ಒಗ್ಗಟ್ಟಾಗಿದ್ದರೆ ಸುರಕ್ಷಿತರಾಗಿರುತ್ತೀರಿ” ಎಂಬ ಘೋಷಣೆಯನ್ನು ಕೂಗುವ ಮೂಲಕ ಆದಿತ್ಯನಾಥರ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿದ್ದರು.
ಆದರೆ, ಮಹಾರಾಷ್ಟ್ರ ಸರಕಾರದಲ್ಲಿರುವ ಬಿಜೆಪಿಯ ಒಂದು ವರ್ಗದ ನಾಯಕರು ಹಾಗೂ ಮಿತ್ರಪಕ್ಷಗಳಲ್ಲಿ ಈ ಘೋಷಣೆ ಅಸಮಾಧಾನ ಮೂಡಿಸಿದೆ.
ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅಂತೂ ಈ ಘೋಷಣೆಯ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. “ನಾನು ಈ ಘೋಷಣೆಯನ್ನು ಬೆಂಬಲಿಸುವುದಿಲ್ಲ. ನಾನಿದನ್ನು ಹಲವಾರು ಬಾರಿ ಹೇಳಿದ್ದೇನೆ. ಇದು ಮಹಾರಾಷ್ಟ್ರದಲ್ಲಿ ಫಲ ನೀಡುವುದಿಲ್ಲ. ಈ ಘೋಷಣೆಯು ಉತ್ತರ ಪ್ರದೇಶ, ಜಾರ್ಖಂಡ್ ಅಥವಾ ಇನ್ನಿತರ ಕೆಲವು ರಾಜ್ಯಗಳಲ್ಲಿ ಮಾತ್ರ ಫಲ ನೀಡುತ್ತದೆ” ಎಂದು ಎಚ್ಚರಿಸಿದ್ದರು.
ಅಜಿತ್ ಪವಾರ್ ಅವರ ಈ ಹೇಳಿಕೆಗೆ ಬಿಜೆಪಿ ನಾಯಕತ್ವದ ಒಂದು ವರ್ಗದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಅಜಿತ್ ಪವಾರ್ ಸಹೋದ್ಯೋಗಿಯೂ ಆದ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
“ಅಜಿತ್ ಪವಾರ್ ಅವರು ಹಲವಾರು ದಶಕಗಳ ಕಾಲ ಜಾತ್ಯತೀತ ಮತ್ತು ಹಿಂದೂ ವಿರೋಧಿಯಾದ ಸಿದ್ಧಾಂತಗಳೊಂದಿಗಿದ್ದರು. ಜಾತ್ಯತೀತರೆಂದುಕೊಳ್ಳುವವರಲ್ಲಿ ನೈಜ ಜಾತ್ಯತೀತತೆಯೇ ಇಲ್ಲ. ಅವರು ಹಿಂದುತ್ವದ ವಿರೋಧವನ್ನೇ ಜಾತ್ಯತೀತತೆ ಎಂದುಕೊಂಡಿರುವವರ ಜೊತೆಗಿದ್ದರು. ಸಾರ್ವಜನಿಕರ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಕೆಲ ಕಾಲ ಹಿಡಿಯಲಿದೆ” ಎಂದು ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದ್ದಾರೆ.
ಈ ಘೋಷಣೆಯಲ್ಲಿ ಅಡಗಿರುವ ಸಂದೇಶವನ್ನು ನಮ್ಮ ಮಿತ್ರಪಕ್ಷಗಳು ಅರ್ಥ ಮಾಡಿಕೊಂಡಿಲ್ಲ. ಈ ಜನರು ಜನರ ಭಾವನೆಗಳನ್ನಾಗಲಿ ಅಥವಾ ಈ ಹೇಳಿಕೆಯ ಅರ್ಥವನ್ನಾಗಲಿ ತಿಳಿದುಕೊಂಡಿಲ್ಲ. ಅಥವಾ ಮಾತನಾಡುವಾಗ ಅವರು ಬೇರೇನೋ ಹೇಳಲು ಬಯಸುತ್ತಿದ್ದಂತಿದೆ” ಎಂದೂ ಹೇಳಿದ್ದಾರೆ.
ಈ ನಡುವೆ, ಬಿಜೆಪಿಯ ಇಬ್ಬರು ಪ್ರಮುಖ ನಾಯಕರಾದ ಪಂಕಜಾ ಮುಂಡೆ ಹಾಗೂ ಅಶೋಕ್ ಚವಾಣ್ ಕೂಡಾ ಈ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.