ಉದ್ಧವ್ ಮತ್ತು ರಾಜ್ ಠಾಕ್ರೆ ಒಂದುಗೂಡುವ ಸುಳಿವು: ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದು ಹೀಗೆ..
ಉದ್ಧವ್ ಮತ್ತು ರಾಜ್ ಠಾಕ್ರೆ | Photo : indiatoday
ಮುಂಬೈ: "ಒಂದು ವೇಳೆ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಒಂದುಗೂಡುವುದಾದರೆ, ನಾವು ಅದರ ಬಗ್ಗೆ ಸಂತೋಷ ಪಡುತ್ತೇವೆ. ಒಂದು ವೇಳೆ ಅವರಿಬ್ಬರೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಾದರೆ, ಅದು ನಿಜಕ್ಕೂ ಒಳ್ಳೆಯದು. ಈ ಕುರಿತು ಮತ್ತೇನು ಹೇಳಲು ಸಾಧ್ಯ?" ಎಂದು ಎರಡು ದಶಕಗಳ ರಾಜಕೀಯ ಪೈಪೋಟಿಯ ನಂತರ, ಮತ್ತೆ ಒಂದುಗೂಡುವ ಸುಳಿವು ನೀಡಿರುವ ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹಿಂದಿಯನ್ನು ಕಡ್ಡಾಯಗೊಳಿಸಿರುವ ಕುರಿತು ರಾಜ್ಯದ ಮರಾಠಿ ಭಾಷಿಕ ಸಮುದಾಯದ ಜನರಲ್ಲಿ ಬೆಳೆಯುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಮತ್ತೆ ಒಂದುಗೂಡುವ ಸುಳಿವು ನೀಡಿದ್ದರು.
ಒಂದರಿಂದ ಐದನೆಯ ತರಗತಿವರೆಗೆ ಹಿಂದಿಯನ್ನು ಮೂರನೆಯ ಭಾಷೆಯನ್ನಾಗಿ ಕಡ್ಡಾಯಗೊಳಿಸಿರುವ ವಿವಾದಾತ್ಮಕ ಭಾಷಾ ನೀತಿಯ ವಿರುದ್ಧ ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಈ ನೀತಿಯಿಂದಾಗಿ ತವರು ರಾಜ್ಯವಾದ ಮಹಾರಾಷ್ಟ್ರದಲ್ಲೇ ಮರಾಠಿ ಭಾಷೆಯ ಪ್ರಾಮುಖ್ಯತೆಗೆ ಧಕ್ಕೆಯುಂಟಾಗಲಿದೆ ಎಂದು ಅವು ವಾದಿಸುತ್ತಿವೆ.
ಕುತೂಹಲಕರವೆಂಬಂತೆ, ಈ ವಿವಾದಾತ್ಮಕ ಭಾಷಾ ನೀತಿಯಿಂದಾಗಿಯೇ, ಎರಡು ದಶಕಗಳಿಂದ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣಕ್ಕೆ ದೂರಾಗಿದ್ದ ಸೋದರ ಸಂಬಂಧಿಗಳಾದ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯ ಮರುಮಿಲನಕ್ಕೆ ವೇದಿಕೆ ಸಿದ್ಧಗೊಂಡಿದೆ.
ಈ ನಡುವೆ, ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಮತ್ತೆ ಒಂದುಗೂಡಲಿದ್ದಾರೆ ಎಂಬ ವದಂತಿಗಳನ್ನು ಅಲ್ಲಗಳೆದಿರುವ ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್, "ಸದ್ಯ ಯಾವುದೇ ಮೈತ್ರಿಯಿಲ್ಲ. ಕೇವಲ ಭಾವನಾತ್ಮಕ ಮಾತುಕತೆಗಳು ಮಾತ್ರ ಪ್ರಗತಿಯಲ್ಲಿವೆ" ಎಂದು ಸ್ಪಷ್ಟಪಡಿಸಿದ್ದಾರೆ.