"ತಿರುಪತಿ ಲಡ್ಡಿನಲ್ಲಿ ತಂಬಾಕು": ʼಪ್ರಾಣಿಗಳ ಕೊಬ್ಬುʼ ಆರೋಪದ ಬೆನ್ನಲ್ಲೇ ಮತ್ತೆ ವಿವಾದ
Photo credit: indiatoday.in
ತಿರುಪತಿ: ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದದ ಮಧ್ಯೆ ತಿರುಪತಿ ದೇವಸ್ಥಾನದಲ್ಲಿ ತನಗೆ ಪ್ರಸಾದವಾಗಿ ನೀಡಲಾಗಿದ್ದ ಲಡ್ಡಿನಲ್ಲಿ ತಂಬಾಕು ಪತ್ತೆಯಾಗಿದೆ ಎಂದು ಭಕ್ತರೊಬ್ಬರು ಆರೋಪಿಸಿದ್ದಾರೆ.
ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದು ಆಂಧ್ರದ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ನಡುವೆ ಜಟಾಪಟಿಗೆ ಕಾರಣವಾಗಿತ್ತು.
ಇದೀಗ ತಿರುಪತಿಯ ಭಕ್ತೆಯೋರ್ವರು ತಿರುಪತಿ ಲಡ್ಡಿನಲ್ಲಿ ತಂಬಾಕು ಇದೆ ಎಂದು ಆರೋಪಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಮ್ಮಂ ಜಿಲ್ಲೆಯ ನಿವಾಸಿ ದೋಂತು ಪದ್ಮಾವತಿ ಅವರು ಸೆ.19ರಂದು ತಾನು ತಿರುಪತಿ ದೇವಸ್ಥಾನದಿಂದ ತಂದ ಲಡ್ಡಿನಲ್ಲಿ ತಂಬಾಕು ಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ. ಲಡ್ಡಿನಲ್ಲಿ ಪೇಪರ್ನಲ್ಲಿ ಸುತ್ತಿದ ತಂಬಾಕಿನ ತುಂಡುಗಳು ಕಂಡು ಗಾಬರಿಯಾಯಿತು. ಪ್ರಸಾದವು ಶುದ್ಧವಾಗಿರಬೇಕು ಮತ್ತು ಇಂತಹ ವಸ್ತುಗಳು ಪ್ರಸಾದದಲ್ಲಿ ಕಂಡು ಬಂದಿರುವುದು ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.