ಮಾಘ ಪೂರ್ಣಿಮೆಯ ಪುಣ್ಯಸ್ನಾನಕ್ಕೆ ತ್ರಿವೇಣಿ ಸಂಗಮದಲ್ಲಿ ಭಕ್ತಸಾಗರ

PC: x.com/airnewsalerts
ಪ್ರಯಾಗ್ ರಾಜ್: ಮಾಘ ಪೂರ್ಣಿಮೆ ಸಂದರ್ಭದ ಪುಣ್ಯ ಸ್ನಾನಕ್ಕಾಗಿ ಬುಧವಾರ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಸ್ನಾನ ಘಟ್ಟಗಳಲ್ಲಿ ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಜಮಾಯಿಸಿದ್ದಾರೆ.
ಸಂಗಮ ಕ್ಷೇತ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಸಂಖ್ಯೆಯ ಭಕ್ತರು ಸೇರಿರುವುದನ್ನು ಪ್ರಯಾಗ್ ರಾಜ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಡ್ರೋಣ್ ಮೂಲಕ ತೆಗೆದ ಫೋಟೊಗಳಿಂದ ದೃಢಪಟ್ಟಿದೆ.
ಮಹಾಕುಂಭ ಮೇಳದ ಹೆಚ್ಚುವರಿ ಅಧಿಕಾರಿ ವಿವೇಕ್ ಚತುರ್ವೇದಿಯವರ ಪ್ರಕಾರ, "ಈ ಬಾರಿಯ ಸ್ನಾನಕ್ಕೆ ಅನಿರೀಕ್ಷಿತ ಜನದಟ್ಟಣೆ ಹರಿದು ಬಂದಿದೆ". ಈ ಸಂದರ್ಭಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬುಧವಾರವಿಡೀ ಪವಿತ್ರ ಸ್ನಾನ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದುವರೆಗೆ ಮಹಾಕುಂಭಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ತ್ರಿವೇಣಿ ಸ್ನಾನ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕಟಿಸಿದ್ದಾರೆ. ಪೌಷ ಪೂರ್ಣಿಮೆಯಂದು (ಜನವರಿ 13) ಆರಂಭವಾದ ಮಹಾಕುಂಭ ಮೇಳ ಫೆಬ್ರುವರಿ 26ರಂದು ಅಂದರೆ ಶಿವರಾತ್ರಿಯಂದು ಮುಕ್ತಾಯವಾಗಲಿದೆ.
ಜನದಟ್ಟಣೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಬರುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಫೆಬ್ರುವರಿ 7ರಿಂದ 12ರವರೆಗೆ ಪ್ರಯಾಗ್ ರಾಜ್ ನ ಎಲ್ಲ ಶಾಲಾ ಕಾಲೇಜುಗಳು ಆನ್ ಲೈನ್ ಮೂಲಕ ಪಾಠಪ್ರವಚನಗಳನ್ನು ಹಮ್ಮಿಕೊಂಡಿವೆ.