ಚೀತಾವನ್ನು ಪರಿಚಯಿಸಿದ್ದರಿಂದ ಮುಂಬೈ ಪೆಂಗ್ವಿನ್ ಯೋಜನೆಯಂತೆ ಆದಾಯವೇನಾದರೂ ಹೆಚ್ಚಿದೆಯೆ? : ಆದಿತ್ಯ ಠಾಕ್ರೆ ಪ್ರಶ್ನೆ
Photo Credit: PTI
ಮುಂಬೈ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಪರಿಚಯಿಸಿದ್ದರಿಂದ ಆದಾಯ ಗಳಿಕೆಯೇನಾದರೂ ಹೆಚ್ಚಿದೆಯೆ ಎಂದು ರವಿವಾರ ಪ್ರಶ್ನಿಸಿರುವ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ಮುಂಬೈ ಮೃಗಾಲಯದಲ್ಲಿನ ಪೆಂಗ್ವಿನ್ ಗಳಿಂದ ಸ್ಥಳೀಯ ಸಂಸ್ಥೆಯ ಆದಾಯ ದ್ವಿಗುಣಗೊಂಡಿದೆ ಎಂದು ಹೇಳಿದ್ದಾರೆ.
ಚೀತಾಗಳನ್ನು ಭಾರತದ ಮಧ್ಯಪ್ರದೇಶದಲ್ಲಿನ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಿದ ನಂತರ, ಅದರ ಆದಾಯವೇನಾದರೂ ಹೆಚ್ಚಿದೆಯೆ ಎಂದು ಯಾರಾದರೂ ಪತ್ತೆ ಹಚ್ಚಬೇಕು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸ್ಥಳೀಯ ಸಂಸ್ಥೆ ನಿರ್ವಹಿಸುತ್ತಿರುವ ವೀರಮಾತಾ ಜೀಜಾಬಾಯಿ ಭೋಸಲೆ ಜೈವಿಕ ಉದ್ಯಾನಕ್ಕೆ ಪೆಂಗ್ವಿನ್ ಗಳನ್ನು ಪರಿಚಯಿಸಿದ್ದರಿಂದ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಗಳಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಮಾಜಿ ರಾಜ್ಯ ಸಚಿವರೂ ಆದ ಆದಿತ್ಯ ಠಾಕ್ರೆ ಪ್ರತಿಪಾದಿಸಿದರು.
ಆಡಳಿತಾಧಿಕಾರಿಯನ್ನು ನೇಮಿಸುವವರೆಗೂ 2022ರವರೆಗೆ ಅವಿಭಜಿತ ಶಿವಸೇನೆ ಆಡಳಿತ ನಡೆಸುತ್ತಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆಯು 2016ರಲ್ಲಿ ಎಂಟು ಹಂಬೋಲ್ಡ್ಟ್ ಪೆಂಗ್ವಿನ್ ಗಳನ್ನು ಪರಿಚಯಿಸಿತ್ತು. ಪೆಂಗ್ವಿನ್ ಪರಿಚಯ ಯೋಜನೆಯು ಆದಿತ್ಯ ಠಾಕ್ರೆಯ ಕನಸಿನ ಯೋಜನೆ ಎಂದು ಹೇಳಲಾಗಿದೆ.
ವಿಶ್ವದ ಪ್ರಪ್ರಥಮ ಅಂತರಖಂಡ ವನ್ಯಮೃಗ ಸ್ಥಳಾಂತರದ ಯೋಜನೆಯಾದ ಚೀತಾ ಯೋಜನೆಯು ಸೆಪ್ಟೆಂಬರ್ 17, 2022ರಂದು ಪ್ರಾರಂಭಗೊಂಡಿತ್ತು. ಈ ಯೋಜನೆಯಡಿ ಎಂಟು ಹೆಣ್ಣು ಚೀತಾಗಳನ್ನು ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆ ತರಲಾಗಿತ್ತು.