ಹೆಚ್ಚು ತಿಳಿದುಕೊಂಡಿದ್ದೇ ಕೊಲ್ಕತ್ತಾ ವೈದ್ಯೆಗೆ ಮುಳುವಾಯಿತೇ? ಪಾಲಕರ ಪ್ರಶ್ನೆ
PC: x.com/PTI_News
ಕೊಲ್ಕತ್ತಾ: ಇಲ್ಲಿನ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಹಲವು ಸ್ಫೋಟಕ ಮಾಹಿತಿಗಳನ್ನು ಒಳಗೊಂಡ ಸಂತ್ರಸ್ತೆಯ ಡೈರಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತನ್ನ ಕರ್ತವ್ಯದಿಂದಾಚೆಗಿನ ಅಂಶಗಳನ್ನು ತಿಳಿದುಕೊಂಡಿದ್ದಕ್ಕೆ ಅವರು ಬೆಲೆ ತೆರಬೇಕಾಯಿತೇ? ಆ ರಹಸ್ಯಗಳನ್ನು ಬಹಿರಂಗವಾಗದಂತೆ ಸದ್ದಡಗಿಸುವ ಸಲುವಾಗಿ ಆಕೆಯ ಹತ್ಯೆಯನ್ನು ಯೋಜಿಸಲಾಗಿತ್ತೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಸಂತ್ರಸ್ತೆ ವೈದ್ಯೆಯ ಪಾಲಕರು ಮತ್ತು ಸಹೋದ್ಯೋಗಿಗಳು ಈ ಪ್ರಶ್ನೆಯನ್ನು ಮುಂದಿಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಏಕೈಕ ಆರೋಪಿ ಸಂಜಯ್ ರಾಯ್, ಬಲೆಗೆ ಬಿದ್ದ ಬಲಿಪಶು. ನೈಜವಾಗಿ ಸಂಚು ರೂಪಿಸಿದವರನ್ನು ಇನ್ನೂ ಬಂಧಿಸಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವೈದ್ಯೆಯ ದಿನಚರಿ ಪುಸ್ತಕ ಮತ್ತು ಪಾಲಕರು ನೀಡಿದ ಮಾಹಿತಿಯಂತೆ ಮೃತ ವೈದ್ಯೆ ಭಾರೀ ಒತ್ತಡದಲ್ಲಿದ್ದರು ಮತ್ತು ಕಳೆದ ಕೆಲ ವಾರಗಳಿಂದ ಕೆಲಸದ ಒತ್ತಡ ಅತ್ಯಧಿಕವಾಗಿತ್ತು. ಎರಡನೇ ವರ್ಷದ ಪಿಜಿ ವೈದ್ಯೆಯಾಗಿ ಒಂದು ವರ್ಷಕ್ಕೂ ಅಧಿಕ ಕಾಲವನ್ನು ಅಲ್ಲಿ ಕಳೆದಿದ್ದು, ಕಿರಿಯ ವೈದ್ಯರು ಒಂದೇ ಬಾರಿಗೆ 36 ಗಂಟೆ ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಸಾಮಾನ್ಯ. ಈ ಒತ್ತಡವನ್ನು ಆಕೆ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.
"ನಮ್ಮ ಪ್ರಕಾರ ಇದು ಕೇವಲ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವಲ್ಲ. ಆಕೆಯನ್ನು ಗುರಿ ಮಾಡಲಾಗಿತ್ತು. ಇಲ್ಲದಿದ್ದರೆ ಆಕೆ ಸೆಮಿನಾರ್ ಹಾಲ್ ನಲ್ಲಿ ಒಬ್ಬಂಟಿಯಾಗಿ ಇದ್ದಾಳೆ ಎಂಬ ಅಂಶ ಒಬ್ಬ ಸ್ವಯಂ ಸೇವಕನಿಗೆ ಹೇಗೆ ಗೊತ್ತಾಗಲು ಸಾಧ್ಯ ಎನ್ನುವುದು ಸಹೋದ್ಯೋಗಿಗಳ ಪ್ರಶ್ನೆ.
ಇತರ ಕೆಲ ಸಹೋದ್ಯೋಗಿಗಳು "ಆಕೆಯ ವಿಭಾಗದಲ್ಲಿ ಇದ್ದ ಔಷಧಿ ಸೋರಿಕೆ ದಂಧೆಯನ್ನು ಬಹಿರಂಗಪಡಿಸಿಲು ಆಕೆ ಯತ್ನಿಸಿದ್ದರು. ಇದು ಅವರನ್ನು ಗುರಿ ಮಾಡಲು ಕಾರಣವಾಗಿರಬಹುದು" ಎಂಬ ಸುಳಿವನ್ನೂ ನೀಡಿದ್ದಾರೆ.