ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ: ನಕಲಿ ವಿಡಿಯೋ ವಿರುದ್ಧ ಎಫ್ಐಆರ್ ದಾಖಲಿಸಿದ ಆಮಿರ್ ಖಾನ್
ಆಮಿರ್ ಖಾನ್ | PC : PTI
ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಅವರು ನಿರ್ದಿಷ್ಟ ರಾಜಕೀಯ ಪಕ್ಷವೊಂದರ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಮಿರ್ ಖಾನ್ ಸ್ಪಷ್ಟೀಕರಣ ನೀಡಿದ್ದು, ತಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತಿಲ್ಲ, ನಕಲಿ ವಿಡಿಯೋಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಂಗಳವಾರ, ಅಮೀರ್ ಖಾನ್ ಅವರ ಅಧಿಕೃತ ವಕ್ತಾರರು ಹೇಳಿಕೆಯನ್ನು ನೀಡಿದ್ದು, “ಅಮೀರ್ ಖಾನ್ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚಿಗೆ ವೈರಲ್ ಆಗುತ್ತಿರುವ ವೀಡಿಯೊದಿಂದ ನಾವು ಆಘಾತಗೊಂಡಿದ್ದೇವೆ. ಇದೊಂದು ನಕಲಿ ವೀಡಿಯೋ ಮತ್ತು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಂಬೈ ಪೊಲೀಸರ ಸೈಬರ್ ಕ್ರೈಮ್ ಸೆಲ್ನಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದ ವಿವಿಧ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿದೆ” ಎಂದು ತಿಳಿಸಿದ್ದಾರೆ.
ಅಮೀರ್ ಎಂದಿಗೂ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲವಾದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಭಾರತೀಯರೂ ಮತ ಚಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಅಮೀರ್ ಖಾನ್ ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಅನುಮೋದಿಸಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲು ಅವರು ತಮ್ಮ ಪ್ರಯತ್ನಗಳನ್ನು ಮಾಡಿದ್ದಾರೆ. ಎಲ್ಲಾ ಭಾರತೀಯರು ಬಂದು ಮತ ಚಲಾಯಿಸುವಂತೆ ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ಸಕ್ರಿಯ ಭಾಗವಾಗುವಂತೆ ಆಮಿರ್ ಖಾನ್ ಅವರು ಕೋರಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.
ಈ ಹಿಂದೆ, ಅಮೀರ್ ಖಾನ್ ಅವರು, ತಮ್ಮ ಟಿವಿ ಶೋ ʼಸತ್ಯಮೇವ ಜಯತೆʼ ನಡೆಸುವಾಗ ಚುನಾವಣೆಯ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು.
ವೃತ್ತಿ ಜೀವನದಲ್ಲಿ ಕೆಲವು ಹಿನ್ನಡೆ ಎದುರಿಸಿದ ನಟ ಆಮಿರ್ ಖಾನ್ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ ಮಾಡಿದ್ದಾರೆ.
ಎಲ್ಲಾ ಭಾರತೀಯರು ಲಕ್ಷಾಧಿಪತಿಗಳು, ಅವರಿಗೆ 15 ಲಕ್ಷ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸುವ ರೀತಿಯಲ್ಲಿ ವಿಡಿಯೋಗೆ ಆಮಿರ್ ಖಾನ್ ಶಬ್ದವನ್ನು ಎಡಿಟ್ ಮಾಡಲಾಗಿ ಹರಿಯಬಿಟ್ಟಿದ್ದು, ಇತ್ತೀಚೆಗೆ ಸಾಕಷ್ಟು ವೈರಲ್ ಆಗಿತ್ತು.
भारत का हर नागरिक लखपति है
— Mini Nagrare (@MiniforIYC) April 14, 2024
क्योंकि सबके पास काम से कम 15 लाख तो होने ही चाहिए ..
क्या कहा
आपके अकाउंट में 15 लाख नहीं है..
तो आपके 15 लाख गए कहां ???
तो ऐसे जुमलेबाजों से रहे सावधान
नहीं तो होगा तुम्हारा नुकसान
देशहित में जारी pic.twitter.com/hJkEFEL5vG