ಡಿಜಿಟಲ್ ಅರೆಸ್ಟ್ | ದೋಷಾರೋಪ ಪಟ್ಟಿ ಸಲ್ಲಿಸಿದ ಈಡಿ
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದಿಂದ ನೂತನ ಸಲಹಾ ಸೂಚಿ ಬಿಡುಗಡೆ
PC : ED
ಹೊಸದಿಲ್ಲಿ : ವಂಚಕ ಆ್ಯಪ್ಗಳ ಮೂಲಕ ನಕಲಿ ಐಪಿಒ ಹಂಚಿಕೆ ಮತ್ತು ಮೋಸದ ಶೇರು ಮಾರುಕಟ್ಟೆ ವಂಚನೆಯಲ್ಲಿ ಭಾಗಿಯಾಗಿದ್ದ ಎಂಟು ಜನರ ವಿರುದ್ಧ ಜಾರಿ ನಿರ್ದೇಶನಾಲಯ(ಈಡಿ)ವು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.
ಆರೋಪಿಗಳು ಹೆಚ್ಚಿನ ಪ್ರತಿಫಲದ ಆಮಿಷವನ್ನೊಡ್ಡಿ ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ. ಈಡಿ ಪ್ರಕಾರ ಭಾರತದಲ್ಲಿನ ಸೈಬರ್ ಹಗರಣಗಳ ಜಾಲವು ವಂಚನೆಗಳನ್ನು ನಡೆಸಲು ಫೇಸ್ಬುಕ್, ಇನ್ಸ್ಟಾಗ್ರಾಂ, ಟೆಲಿಗ್ರಾಮ್ ಮತ್ತು ವಾಟ್ಸ್ಯಾಪ್ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದೆ.
‘ಪಿಗ್-ಬುಚರಿಂಗ್’ ಹಗರಣಗಳು ಎಂದು ಕರೆಯಲ್ಪಡುವ ಇವು ನಕಲಿ ಜಾಹೀರಾತುಗಳು ಮತ್ತು ಅಧಿಕ ಆದಾಯದ ಭರವಸೆಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಗಾಗಿ ಬಲಿಪಶುಗಳನ್ನು ಆಕರ್ಷಿಸುತ್ತವೆ.
ವಂಚಕರು ಕಸ್ಟಮ್ಸ್ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ‘ಡಿಜಿಟಲ್ ಅರೆಸ್ಟ್’ಗೊಳಪಡಿಸಿ ಗಣನೀಯ ಮೊತ್ತವನ್ನು ಬಲವಂತದಿಂದ ವರ್ಗಾಯಿಸಿಕೊಂಡಿದ್ದಾರೆ ಎಂದು ಈಡಿ ವಿವರಿಸಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ(I4ಅ)ವು ರವಿವಾರ ಡಿಜಿಟಲ್ ಅರೆಸ್ಟ್ಗಳ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಹೊಸ ಸಲಹಾಸೂಚಿಯನ್ನು ಹೊರಡಿಸಿದೆ.
ವೀಡಿಯೊ ಕರೆಗಳನ್ನು ಮಾಡುವವರು ಪೋಲಿಸರು, ಸಿಬಿಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ಅಥವಾ ನ್ಯಾಯಾಧೀಶರಲ್ಲ ಎಂದು ಒತ್ತಿ ಹೇಳಿರುವ ಅದು, ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ ಇಂತಹ ಅಪರಾಧಗಳನ್ನು ತಕ್ಷಣವೇ ವರದಿ ಮಾಡುವಂತೆ ಸಾರ್ವಜನಿಕರನ್ನು ಆಗ್ರಹಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಅ.27ರಂದು ತನ್ನ ಮನ್ ಕಿ ಬಾತ್ ರೇಡಿಯೊ ಭಾಷಣದಲ್ಲಿ ಡಿಜಿಟಲ್ ಅರೆಸ್ಟನ್ನು ಪ್ರಮುಖವಾಗಿ ಪ್ರಸ್ತಾವಿಸಿದ್ದರು.
ಈಡಿ ತನಿಖೆಯ ಬಳಿಕ ಚರಣ್ ರಾಜ್ ಸಿ., ಕಿರಣ್ ಎಸ್.ಕೆ., ಶಶಿಕುಮಾರ್ ಎಂ., ತಮಿಳರಸನ್, ಸಚಿನ್ ಎಂ., ಪ್ರಕಾಶ್ ಆರ್., ಅಜಿತ್ ಆರ್. ಮತ್ತು ಅರವಿಂದನ್ ಎನ್ನುವವರನ್ನು ಬಂಧಿಸಿದ್ದು, ಅವರು ಮತ್ತು 24 ಸಂಬಂಧಿತ ಕಂಪನಿಗಳು ಸಾರ್ವಜನಿಕರಿಗೆ 159 ಕೋಟಿ ರೂ.ಗಳನ್ನು ಪಂಗನಾಮ ಹಾಕಿರುವುದಾಗಿ ಆರೋಪಿಸಲಾಗಿದೆ.
ವಂಚಕರು ತಮ್ಮ ದಂಧೆಗಾಗಿ ಶೆಲ್ ಕಂಪನಿಗಳ ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆಗೊಂಡಿದ್ದ ನೂರಾರು ಸಿಮ್ ಕಾರ್ಡ್ಗಳನ್ನು ಬಳಸಿದ್ದು ಈಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈಡಿ ಆರೋಪಿಗಳಿಂದ ಚೆಕ್ಬುಕ್ಗಳು ಮತ್ತು ಸಂವಹನ ದಾಖಲೆಗಳಂತಹ ಪುರಾವೆಗಳನ್ನು ವಶಪಡಿಸಿಕೊಂಡಿದ್ದು, ಇವು ಸೈಬರ್ ವಂಚನೆಗಳಿಂದ ಗಳಿಸಿದ್ದ ಹಣದ ಅಕ್ರಮ ವರ್ಗಾವಣೆಯಲ್ಲಿ ಆರೋಪಿಗಳು ಭಾಗಿಯಾಗಿದ್ದನ್ನು ತೋರಿಸಿವೆ ಎಂದು ಹೇಳಲಾಗಿದೆ.