ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ: ಪ್ರತಿಪಕ್ಷಗಳ ಘೋಷಣೆಗಳ ನಡುವೆ ಲೋಕಸಭೆಯ ಅಂಗೀಕಾರ
ಲೋಕಸಭ. | Photo: PTI
ಹೊಸದಿಲ್ಲಿ: ಲೋಕಸಭೆಯು ಸೋಮವಾರ ಮಣಿಪುರ ವಿಷಯ ಕುರಿತು ಪ್ರತಿಪಕ್ಷಗಳ ಸದಸ್ಯರ ಘೋಷಣೆಗಳ ನಡುವೆಯೇ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ,2023 (ಡಿಪಿಡಿಪಿ) ಅನ್ನು ಧ್ವನಿಮತದಿಂದ ಅಂಗೀಕರಿಸಿತು.
ಪ್ರತಿಪಕ್ಷ ಸದಸ್ಯರು ಸಲ್ಲಿಸಿದ್ದ ಕೆಲವು ತಿದ್ದುಪಡಿಗಳು ಧ್ವನಿಮತದಿಂದ ತಿರಸ್ಕರಿಸಲ್ಪಟ್ಟವು.
ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಸೂದೆಯನ್ನು ಮಂಡಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು, ಸಾರ್ವಜನಿಕ ಕಲ್ಯಾಣ ಮತ್ತು ಜನರ ವೈಯಕ್ತಿಕ ದತ್ತಾಂಶಗಳ ರಕ್ಷಣೆಯಂತಹ ವಿಷಯಗಳ ಬಗ್ಗೆ ಪ್ರತಿಪಕ್ಷ ಸದಸ್ಯರಿಗೆ ಕೊಂಚವೂ ಕಾಳಜಿಯಿಲ್ಲ, ಹೀಗಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಹೇಳಿದರು. ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸುವಂತೆ ಅವರು ಸದನವನ್ನು ಆಗ್ರಹಿಸಿದರು.
ನಾಗರಿಕರ ದತ್ತಾಂಶಗಳ ಸುರಕ್ಷತೆಗಾಗಿ ಸರಕಾರವು ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ,2023 (ಡಿಪಿಡಿಪಿ) ಅನ್ನು ತಂದಿದೆ. ಇದು ಮಸೂದೆಯ ಮೂರನೇ ಆವೃತ್ತಿಯಾಗಿದ್ದು,2017ರಿಂದಲೂ ಮಸೂದೆಯ ಕರಡು ರಚನೆ ಕಾರ್ಯ ಪ್ರಗತಿಯಲ್ಲಿತ್ತು. ಅದೇ ವರ್ಷ ಸರ್ವೋಚ್ಚ ನ್ಯಾಯಾಲಯವು,ದೇಶದಲ್ಲಿ ಇತರ ಯಾವುದೇ ಹಕ್ಕಿನಂತೆ ಗೋಪ್ಯತೆಯೂ ಭಾರತೀಯರ ಮೂಲಭೂತ ಹಕ್ಕು ಆಗಿದೆ ಎಂದು ಎತ್ತಿ ಹಿಡಿದಿತ್ತು. ನ್ಯಾಯಾಲಯದ ಈ ತೀರ್ಪು ಗೋಪ್ಯತೆ ಹಕ್ಕಿನ ರಕ್ಷಣೆಗಾಗಿ ಶಾಸನವನ್ನು ತರುವುದನ್ನು ಸರಕಾರಕ್ಕೆ ಅನಿವಾರ್ಯವಾಗಿಸಿತ್ತು.
ಭಾರತೀಯ ನಾಗರಿಕರ ಗೋಪ್ಯತೆಯನ್ನು ರಕ್ಷಿಸಲು ಉದ್ದೇಶಿಸಿರುವ ಮಸೂದೆಯು, ವ್ಯಕ್ತಿಗಳ ವೈಯಕ್ತಿಕ ದತ್ತಾಂಶಗಳನ್ನು ದುರುಪಯೋಗ ಮಾಡಿಕೊಳ್ಳುವ ಅಥವಾ ಅವುಗಳನ್ನು ರಕ್ಷಿಸುವಲ್ಲಿ ವಿಫಲಗೊಳ್ಳುವ ಸಂಸ್ಥೆಗಳಿಗೆ 250 ಕೋ.ರೂ.ವರೆಗೆ ದಂಡವನ್ನು ಪ್ರಸ್ತಾವಿಸಿದೆ. ಗೋಪ್ಯತೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಆರು ವರ್ಷಗಳ ಬಳಿಕ ಬಂದಿರುವ ಮಸೂದೆಯು ಆನ್ಲೈನ್ ವೇದಿಕೆಗಳಲ್ಲಿ ವ್ಯಕ್ತಿಗಳ ದತ್ತಾಂಶಗಳ ದುರುಪಯೋಗವನ್ನು ತಡೆಯಲು ನಿಬಂಧನೆಗಳನ್ನು ಹೊಂದಿದೆ.