ದಶಕಗಳ ಬಳಿಕ ರಾಜ್ ಘರ್ ಲೋಕಸಭಾ ಕ್ಷೇತ್ರಕ್ಕೆ ಮರಳಿದ ದಿಗ್ವಿಜಯ್ ಸಿಂಗ್
2019ರ ಭೋಪಾಲ್ ಸೋಲಿನ ಬಳಿಕ ಕ್ಷೇತ್ರ ಬದಲಿಸಿದ ಕಾಂಗ್ರೆಸ್ ದಿಗ್ಗಜ
Photo : PTI
ಹೊಸದಿಲ್ಲಿ : ಕಾಂಗ್ರೆಸ್ ಬಿಡುಗಡೆ ಮಾಡಿರುವ 46 ಅಭ್ಯರ್ಥಿಗಳಿರುವ ನಾಲ್ಕನೇ ಪಟ್ಟಿಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರಿಗೆ ರಾಜ್ ಘರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ್ ಸಿಂಗ್ ಅವರು ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಸೋತಿದ್ದರು.
ದಿಗ್ವಿಜಯ್ ಸಿಂಗ್ ಅವರು ದಶಕಗಳ ಬಳಿಕ ತಾವು ಮುಖ್ಯಮಂತ್ರಿಯಾಗುವ ಮೊದಲು ಸಂಸತ್ ಸದಸ್ಯರಾಗಿದ್ದ ರಾಜ್ಘರ್ ಕ್ಷೇತ್ರಕ್ಕೆ ಮರಳಿದ್ದಾರೆ. 1984 ಮತ್ತು 1991ರಲ್ಲಿ ಸಿಂಗ್ ಅವರು ರಾಜ್ ಘರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1993ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುವ ಅವಕಾಶ ಬಂದಾಗ, ತಮ್ಮ ಸಂಸತ್ ಸ್ಥಾನಕ್ಕೆ ರಾಜಿನಾಮೆ ನೀಡಿದರು. 1993 ರಿಂದ 2003ರ ವರೆಗೆ ಎರಡು ಅವಧಿಗೆ ಅವರು ಮಧ್ಯ ಪ್ರದೇಶದ ಸಿಎಂ ಆದರು.
1984ರಿಂದ 2004ರ ವರೆಗೆ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ರಾಜ್ ಘರ್ ಕ್ಷೇತ್ರವನ್ನು ಮತ್ತೆ ವಾಪಸ್ ಪಡೆಯಲು ಪಕ್ಷವು ಸಿದ್ಧತೆ ನಡೆಸಿದೆ. ಈ ಕ್ಷೇತ್ರದಲ್ಲಿ 2004 ರಲ್ಲಿ ಬಿಜೆಪಿ ಗೆದ್ದಿತು. 2009ರಲ್ಲಿ ನಾರಾಯಣ್ ಸಿಂಗ್ ಅವರು ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದರು. 2014ರ ಮೋದಿ ಅಲೆಯಲ್ಲಿ ಈ ಕ್ಷೇತ್ರವು ಬಿಜೆಪಿ ಪಾಲಾಯಿತು. 2019ರಲ್ಲೂ ಬಿಜೆಪಿಯ ರೋದ್ಮಾಲ್ ನಗರ್ ಅವರು ಇಲ್ಲಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ರೋದ್ಮಾಲ್ ನಗರ್ ಅವರು ಮೂರನೇ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಮೂಲಕ ದಿಗ್ವಿಜಯ್ ಸಿಂಗ್ ಅವರಿಗೆ ನೇರ ಸ್ಪರ್ಧೆಯೊಡ್ಡಲಿದ್ದಾರೆ.