ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ ; ಸೇನಾ ತುಕಡಿಗಳನ್ನು ಹಿಂಪಡೆಯುವಂತೆ ಭಾರತಕ್ಕೆ ಸೂಚಿಸಿದ ಮಾಲ್ದೀವ್ಸ್
ಮುಹಮ್ಮದ್ ಮುಯಿಝ್ಝು , ನರೇಂದ್ರ ಮೋದಿ| Photo: PTI
ಹೊಸದಿಲ್ಲಿ: ಮಾರ್ಚ್ 15ರೊಳಗೆ ದ್ವೀಪಸಮೂಹ ರಾಷ್ಟ್ರವಾದ ಮಾಲ್ದೀವ್ಸ್ ನಿಂದ ಭಾರತದ ಸೇನಾ ತುಕಡಿಗಳನ್ನು ಹಿಂಪಡೆಯುವಂತೆ ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಭಾರತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನುದ್ದೇಶಿಸಿ ಮಾಲ್ದೀವ್ಸ್ ಸಚಿವರು ಅವಹೇಳನಾಕಾರಿ ಹೇಳಿಕೆಗಳನ್ನು ನೀಡಿದ್ದರಿಂದ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಿರುವಾಗಲೇ ಈ ಪ್ರಸ್ತಾವ ಬಂದಿದೆ ಎಂದು indiatoday.in ವರದಿ ಮಾಡಿದೆ.
ಭಾರತದೊಂದಿಗಿನ ಸಂಬಂಧಗಳನ್ನು ಕಡಿತಗೊಳಿಸಿ, ಚೀನಾದೊಂದಿಗಿನ ಬಾಂಧವ್ಯವನ್ನು ವೃದ್ಧಿಗೊಳಿಸುವುದಾಗಿ ನವೆಂಬರ್, 2023ರಲ್ಲಿ ಚುನಾವಣಾ ವೇದಿಕೆಯಲ್ಲಿ ಅಭಿಯಾನ ನಡೆಸಿದ್ದ ಮಾಲ್ದೀವ್ಸ್ ನ ನೂತನ ಅಧ್ಯಕ್ಷ ಮುಯಿಝ್ಝು, ತನ್ನ ದೇಶದಲ್ಲಿ ನೆಲೆ ನಿಂತಿರುವ ಭಾರತೀಯ ಸೇನಾ ತುಕಡಿಗಳನ್ನು ಹಿಂಪಡೆಯುವಂತೆ ಭಾರತಕ್ಕೆ ಅಧಿಕೃತ ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದಿನ ಮಾಲ್ದೀವ್ಸ್ ಸರ್ಕಾರದ ಕೋರಿಕೆಯಂತೆ ಹಲವಾರು ವರ್ಷಗಳಿಂದ ಭಾರತದ ಸಣ್ಣ ಪ್ರಮಾಣದ ಸೇನಾ ತುಕಡಿಗಳು ಮಾಲ್ದೀವ್ಸ್ ನಲ್ಲಿ ನೆಲೆ ನಿಂತಿವೆ. ಈ ಉಪಸ್ಥಿತಿಯು ಕಡಲ ಭದ್ರತೆ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೆರವು ಒದಗಿಸುತ್ತಿದೆ.