ಡೈರಕ್ಟ್ ಟು ಮೊಬೈಲ್ | ಮೊಬೈಲ್ ಫೋನ್ ಗಳಲ್ಲಿ ಟಿ.ವಿ. ಚಾನೆಲ್ ಗಳ ನೇರ ಪ್ರಸಾರಕ್ಕೆ ಪ್ರಸಾರ ಭಾರತಿ ಯೋಜನೆ
PC : X
ಹೊಸದಿಲ್ಲಿ : ಡೈರಕ್ಟ್ ಟು ಮೊಬೈಲ್ (ಡಿ2ಎಂ) ತಂತ್ರಜ್ಞಾನದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವ ಪ್ರಯೋಗಗಳು ಪ್ರಾರಂಭವಾಗುತ್ತಿದ್ದಂತೆ ಸಾರ್ವಜನಿಕ ಪ್ರಸಾರಕ ಪ್ರಸಾರ ಭಾರತಿ ಇಂಟರ್ನೆಟ್ ಸಂಪರ್ಕವಿಲ್ಲದೆ ಸ್ಮಾರ್ಟ್ ಫೋನ್ ಗಳಲ್ಲಿ ಲೈವ್ ಟಿವಿ ಚಾನೆಲ್ ಗಳ ಪ್ರಸಾರವನ್ನು ಸುಲಭಗೊಳಿಸಲು ಕ್ರಾಂತಿಕಾರಿ ಹೆಜ್ಜೆ ಇರಿಸಿದೆ.
ಐಐಟಿ ಕಾನ್ಪುರ ಹಾಗೂ ಸಾಂಖ್ಯಾ ಲ್ಯಾಬ್ಸ್ನ ಸಹಭಾಗಿತ್ವದಲ್ಲಿ ಹೆಚ್ಚು ಶಕ್ತಿ ಹಾಗೂ ಕಡಿಮೆ ಶಕ್ತಿಯ ಟ್ರಾನ್ಸ್ಮೀಟರ್ಗಳನ್ನು ಬಳಸಿ ದಿಲ್ಲಿ ಸೇರಿದಂತೆ ವಿವಿಧ ನಗರಗಳಲ್ಲಿ ಪ್ರಸಾರಕರು ಪ್ರಯೋಗಗಳನ್ನು ನಡೆಸುತ್ತಿದ್ದಾರೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಐಐಟಿ ಕಾನ್ಪುರದೊಂದಿಗೆ ಡಿ2ಎಂ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದನ್ನು ಇನ್ನಷ್ಟು ಮುಂದಕ್ಕೆ ಒಯ್ಯಲು ಸೆಲ್ಯುಲಾರ್ ಗೋಪುರಗಳ ಮೇಲೆ ಟ್ರಾನ್ಸ್ಮೀಟರ್ ಹಾಗೂ ಮೊಬೈಲ್ ಫೋನ್ ಗಳಲ್ಲಿ ಚಿಪ್ಗಳ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಟಿ.ವಿ. ರೇಡಿಯೋದಂತಹ ಬ್ರಾಡ್ಕಾಸ್ಟ್ ಸಿಗ್ನಲ್ ಗಳನ್ನು ಬಳಸಿಕೊಂಡು ಮೊಬೈಲ್ ಗಳಿಗೆ ನೇರ ಪ್ರಸಾರ ಮಾಡಲಾಗುತ್ತದೆ. ಇದಕ್ಕೆ ಸಾಂಪ್ರದಾಯಿಕ ಸೆಲ್ಯುಲಾರ್ ಅಥವಾ ಇಂಟರ್ನೆಟ್ ನೆಟ್ವರ್ಕ್ಗಳ ಅವಶ್ಯಕತೆ ಇಲ್ಲ. ಬ್ರಾಡ್ಕಾಸ್ಟ್ ಸಿಗ್ನಲ್ ಗಳನ್ನು ಸ್ವೀಕರಿಸಲು ಹಾಗೂ ಡಿಕೋಡ್ ಮಾಡಲು ಫೋನ್ ಅಥವಾ ಸಾಧನಗಳಿಗೆ ನಿರ್ದಿಷ್ಟ ಹಾರ್ಡ್ವೇರ್ನ ಅಗತ್ಯ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತಂತ್ರಜ್ಞಾನ ಉತ್ತಮ ಗುಣಮಟ್ಟದ ವೀಡಿಯೊ ಆಡಿಯೋ ಸ್ಟ್ರೀಮಿಂಗ್ ಅನ್ನು ಸಾಧ್ಯವಾಗಿಸಬಹುದು. ಏಕೆಂದರೆ, ಇದು ಇಂಟರ್ನೆಟ್ ಸಂಪರ್ಕದ ವೇರಿಯೆಬಲ್ ಸ್ಪೀಡ್ ಹಾಗೂ ಸ್ಥಿರತೆಯನ್ನು ಅವಲಂಬಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ಗೆ ನೇರ ಪ್ರಸಾರ, 5ಜಿ, ಗ್ರಾಮೀಣ ಬ್ರಾಡ್ಬಾಂಡ್ ಹಾಗೂ ಮುಂದಿನ ತಲೆಮಾರಿನ ಪ್ರಸಾರ ಗುಣಮಟ್ಟಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನಾ ಸಹಭಾಗಿತ್ವದ ಒಪ್ಪಂದಕ್ಕೆ ಸಚಿವಾಲಯ 2019 ಜುಲೈಯಲ್ಲಿ ಸಹಿ ಹಾಕಿದೆ. ತೇಜಸ್ ನೆಟ್ವರ್ಕ್ಸ್ನ ಅಂಗ ಸಂಸ್ಥೆಯಾಗಿರುವ ಸಾಂಖ್ಯಾ ಲಾಬ್ಸ್ ಕರ್ನಾಟಕ ಮೂಲದ ಪ್ರಮುಖ ವಯರ್ಲೆಸ್ ಸಂವಹನದ ಪೂರೈಕದಾರನಾಗಿದೆ.