ವಿಪತ್ತು ಪರಿಹಾರ ಯೋಜನೆ | ಕರ್ನಾಟಕ ಸಹಿತ 15 ರಾಜ್ಯಗಳಿಗೆ ಒಟ್ಟು 1 ಸಾವಿರ ಕೋಟಿ ರೂ. ಅನುದಾನ
ಅಮಿತ್ ಶಾ | PC : PTI
ಹೊಸದಿಲ್ಲಿ : ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ ವಿವಿಧ ವಿಪತ್ತು ಉಪಶಮನ ಹಾಗೂ ಸಾಮರ್ಥ್ಯ ನಿರ್ಮಾಣ ಯೋಜನೆಗಳಿಗಾಗಿ ಒಟ್ಟು 1 ಸಾವಿರ ಕೋಟಿ ರೂ.ಅನುದಾನ ಬಿಡುಗಡೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಅನುಮೋದನೆಯನ್ನು ನೀಡಿದೆ.
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣಾ ಕಾರ್ಯಕರ್ತರ ತರಬೇತಿ ಹಾಗೂ ಸಾಮರ್ಥ್ಯ ನಿರ್ಮಾಣಕ್ಕಾಗಿ 115.67 ಕೋಟ ರೂ.ಯೋಜನಾಗಾತ್ರದ ಇನ್ನೊಂದು ಯೋಜನೆಗೂ ಸಮಿತಿಯು ಅನುಮೋದನೆ ನೀಡಿದೆ.
ವಿಪತ್ತು ಉಪಶಮನ ಹಾಗೂ ಸಾಮರ್ಥ್ಯ ನಿರ್ಮಾಣ ಯೋಜನೆಗಳಿಗಾಗಿ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಕ್ಕೆ ತಲಾ 139 ಕೋಟಿ ರೂ.,ಮಹಾರಾಷ್ಟ್ರಕ್ಕೆ 100 ಕೋಟಿ ರೂ., ಕರ್ನಾಟಕ ಹಾಗೂ ಕೇರಳಕ್ಕೆ ತಲಾ 72 ಕೋಟಿ ರೂ., ತಮಿಳುನಾಡು ಹಾಗೂ ಪಶ್ಚಿಮಬಂಗಾಳಕ್ಕೆ ತಲಾ 50 ಕೋಟಿ ರೂ. ಮತ್ತು ಈಶಾನ್ಯಭಾರತದ ಎಂಟು ರಾಜ್ಯಗಳಾದ ಅಸ್ಸಾಂ, ಅರುಣಾಚಲಪ್ರದೇಶ,ಮಣಿಪುರ, ಮೇಘಾಲಯ,ಮಿರೆರಾಂ, ನಾಗಾಲ್ಯಾಂಡ್, ಸಿಕ್ಕಿ ಹಾಗೂ ತ್ರಿಪುರಾಗೆ ಒಟ್ಟು 378 ಕೋಟಿ ರೂ.ಬಿಡುಗಡೆಗೆ ಅನುಮೋದನೆ ನೀಡಲಾಗಿದೆಯೆಂದು ಅಧಿಕೃತ ಹೇಳಿಕೆ ತಿಳಿಸಿದೆ.
ಅಮಿತ್ ಶಾ ನೇತೃತ್ವದ ಈ ಸಮಿತಿಯಲ್ಲಿ ವಿತ್ತ ಹಾಗೂ ಕೃಷಿ ಸಚಿವರು ಮತ್ತು ನೀತಿ ಆಯೋಗದ ಉಪಾಧ್ಯಕ್ಷರು ಸದಸ್ಯರಾಗಿರುವರು. ಈ 15 ರಾಜ್ಯಗಳು ಭೂಕುಸಿತದ ಅಪಾಯಗಳನ್ನು ಎದುರಿಸುತ್ತಲೇ ಇರುವುದನ್ನು ಪರಿಗಣನೆಗೆ ತೆಗೆದುಕೊಂಡು, ಅವುಗಳಿಗೆ ರಾಷ್ಟ್ರೀಯ ವಿಪತ್ತ ಉಪಶಮನ ನಿಧಿ (ಎನ್ಡಿಎಂಎಫ್)ನಿಂದ ಈ ನಿಧಿಯನ್ನು ಮಂಜೂರು ಮಾಡಲಾಗುವುದೆಂದು ಮೂಲಗಳು ತಿಳಿಸಿವೆ.
ಈ ಮೊದಲು ಸಮಿತಿಯು ಎನ್ಡಿಎಂಎಫ್ ಮುಖಾಂತರ ಏಳು ನಗರಗಳಲ್ಲಿ ಪ್ರವಾಹ ಪರಿಹಾರ ಯೋಜನೆಗಳಿಗೆ 3075.65 ಕೋಟಿ ರೂ. ಮತ್ತು ನಾಲ್ಕು ರಾಜ್ಯಗಳಲ್ಲಿ ಹಿಮ ಸರೋವರಗಳ ದಿಢೀರ್ ಪ್ರವಾಹದ ಅಪಾಯ ನಿರ್ವಹಣಾ ಯೋಜನೆಗಳಿಗೆ 150 ಕೋಟಿ ರೂ.ಗಳ ಯೋಜನಾಗಾತ್ರಗಳಿಗೆ ಅನುಮೋದನೆಯನ್ನು ನೀಡಿತ್ತು.
ವಿಪತ್ತನ್ನು ಗೆಲ್ಲುವ ಭಾರತವನ್ನು ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಸಾಕಾರಗೊಳಿಸಲು ದೇಶಾದ್ಯಂತ ವಿಪತ್ತುಗಳ ಪರಿಣಾಮಕಾರಿ ನಿರ್ವಹಣೆಗಾಗಿ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಗೃಹ ಸಚಿವಾಲಯವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆಯೆಂದು ಹೇಳಿಕೆ ತಿಳಿಸಿದೆ.
ಭಾರತದಲ್ಲಿ ವಿಪತ್ತಿನ ಅಪಾಯವನ್ನು ತಗ್ಗಿಸುವ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ವಿಕೋಪಗಳ ಸಂದರ್ಭದಲ್ಲಿ ಜೀವ ಹಾಗೂ ಆಸ್ತಿ ಹಾನಿಯಾಗುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.