ಕಣಿವೆ ಸ್ಥಾನಗಳಲ್ಲಿ ಸ್ಪರ್ಧಿಸದಿರುವ ಪಕ್ಷದ ನಿರ್ಧಾರದ ಕುರಿತು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: 370ನೇ ವಿಧಿ ರದ್ದತಿ ಹಾಗೂ 2019ರಲ್ಲಿ ಈ ಮುಂಚಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿದ ನಂತರ ನಡೆಯುತ್ತಿರುವ ಪ್ರಥಮ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದ ಪಕ್ಷದ ಕಾರ್ಯಕರ್ತರು ಕಾಶ್ಮೀರ ಕಣಿವೆಯ ಮೂರೂ ಸ್ಥಾನಗಳಲ್ಲಿ ಸ್ಪರ್ಧಿಸದಿರುವ ಪಕ್ಷದ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ ಎಂದು ಬಿಜೆಪಿಯ ನಾಯಕರು ಹೇಳಿದ್ದಾರೆ.
ಕಾಶ್ಮೀರದ ಮೂರು ಲೋಕಸಭಾ ಸ್ಥಾನಗಳಾದ ಶ್ರೀನಗರ, ಬಾರಾಮುಲ್ಲ, ಅನಂತನಾಗ್-ರಜೌರಿ ಕ್ಷೇತ್ರಗಳಿಂದ ಸ್ಪರ್ಧಿಸದಿರುವ ಪಕ್ಷದ ಹೈಕಮಾಂಡ್ ನಿರ್ಧಾರದಿಂದ ತಮಗೆ ಅಚ್ಚರಿಯಾದರೂ, ಆ ನಿರ್ಧಾರವನ್ನು ಪ್ರಶ್ನಿಸಲು ಹೋಗಲಿಲ್ಲ ಎಂದು ಹೆಸರೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ ಎಂದು Hindustan Times ಸುದ್ದಿ ಸಂಸ್ಥೆ ವರದಿ ಮಾಡಿದೆ.
"ರಾಜ್ಯ ಘಟಕದ ಅಧ್ಯಕ್ಷ ರವೀಂದರ್ ರೈನಾರ ಪ್ರಕಟಣೆಯಿಂದ ನಮಗೆ ಆಘಾತವಾಯಿತು. ನಾವು ಹಲವಾರು ವರ್ಷಗಳಿಂದ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ವಿರೋಧಿಗಳ ವಿರುದ್ಧ ಸ್ಪರ್ಧಿಸಲು ಇದು ಸಕಾಲವಾಗಿತ್ತು" ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಅಳೆಯಲು ನಡೆಸಲಾಗಿದ್ದ ಚುನಾವಣಾ ಪೂರ್ವ ಸಮೀಕ್ಷೆಗಳ ಫಲಿತಾಂಶವು ಪಕ್ಷವು ಸ್ಪರ್ಧೆಯಿಂದ ಹೊರಗುಳಿಯಲು ಪ್ರಮುಖ ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ಒಟ್ಟು ಐದು ಲೋಕಸಭಾ ಕ್ಷೇತ್ರಗಳಿದ್ದರೆ, ಲಡಾಖ್ ಪ್ರಾಂತ್ಯದಲ್ಲಿ ಒಂದು ಲೋಕಸಭಾ ಕ್ಷೇತ್ರವಿದೆ. ಈ ಪೈಕಿ ಜಮ್ಮು ಪ್ರಾಂತ್ಯದ ಜಮ್ಮು ಮತ್ತು ಉಧಂಪುರ್ ಲೋಕಸಭಾ ಕ್ಷೇತ್ರಗಳಲ್ಲಿ ಮೊದಲೆರಡು ಹಂತದ ಚುನಾವಣೆಯಲ್ಲಿ ಮತದಾನ ನಡೆದಿದ್ದರೆ, ಅನಂತನಾಗ್-ರಜೌರಿ, ಶ್ರೀನಗರ ಹಾಗೂ ಬಾರಾಮುಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಉಳಿದ ಹಂತದ ಚುನಾವಣೆಗಳಲ್ಲಿ ಮತದಾನ ನಡೆಯಲಿದೆ.