ಅಂಬೇಡ್ಕರ್ ಕೃತಿಗಳ ಬಗ್ಗೆ ವಿವಿ ಕ್ಯಾಂಪಸ್ನಲ್ಲಿ ಚರ್ಚೆ: ದಲಿತ ಶಿಕ್ಷಕರ ವಿರುದ್ಧ ಕ್ರಮ
PC : telegraphindia.com
ಹೊಸದಿಲ್ಲಿ: ಭೀಮರಾವ್ ಅಂಬೇಡ್ಕರ್ ಅವರ ಕೃತಿಗಳ ಅಧ್ಯಯನ ಮತ್ತು ಚರ್ಚೆಯ ಸಾಪ್ತಾಹಿಕ ಕಾರ್ಯಕ್ರಮವನ್ನು ಕೈಬಿಡುವಂತೆ ಕೇಂದ್ರೀಯ ವಿಶ್ವವಿದ್ಯಾನಿಲಯ ದಲಿತ ಪ್ರಾಧ್ಯಾಪಕರ ಅನೌಪಚಾರಿಕ ಸಂಘಟನೆಯನ್ನು ಬಲವಂತಪಡಿಸಿದೆ. ಈ ಸಂಬಂಧ ಏಳು ಮಂದಿ ಪ್ರಾಧ್ಯಾಪಕರಿಗೆ ಶೋಕಾಸ್ ನೋಟಿಸ್ ನೀಡಿದ್ದು, ನಾಲ್ಕು ಮಂದಿಯ ವಿರುದ್ಧ ಕ್ರಮ ಕೈಗೊಂಡಿದೆ ಎಂದು telegraphindia.com ವರದಿ ಮಾಡಿದೆ.
"ಅಂಬೇಡ್ಕರ್ ಕೃತಿಗಳ ಅಧ್ಯಯನವನ್ನು ಎರಡು ವರ್ಷ ಹಿಂದೆ ಮಹಾತ್ಮಾಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಲಾಗಿತ್ತು. ಇದು ಪಾಲ್ಗೊಳ್ಳುವ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಹಾಗೂ ವಿಶ್ವವಿದ್ಯಾನಿಲಯದ ಘನತೆಗೆ ಧಕ್ಕೆ ಬರಬಹುದು ಎಂಬ ಕಾರಣದಿಂದ ಈ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದೆ.
ಈ ಘಟನೆಗೆ ವಿಷಾದ ವ್ಯಕ್ತಪಡಿಸಲು ಶೋಕಾಸ್ ನೋಟಿಸ್ ಪಡೆದ ಹಲವು ಮಂದಿ ಶಿಕ್ಷಕರು ನಿರಾಕರಿಸಿದ ಹಿನ್ನೆಲೆಯಲ್ಲಿ, ಈ ಪೈಕಿ ಇಬ್ಬರನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ. ಉಳಿದವರನ್ನು ಕ್ಯಾಂಪಸ್ನ ಶೈಕ್ಷಣಿ ಕೇಂದ್ರದಲ್ಲಿ ಅವರು ಹೊಂದಿದ್ದ ಹುದ್ದೆಗಳಿಂದ ವಜಾಗೊಳಿಸಿದೆ.
ಅಂಬೇಡ್ಕರ್ ಅವರ ಬರಹ ಮತ್ತು ಭಾಷಣದಂಥ ವಿಷಯದ ಬಗ್ಗೆ ಮುಕ್ತ ಚರ್ಚೆ ಏರ್ಪಡಿಸಿದ್ದಕ್ಕೆ ಕ್ರಮ ಕೈಗೊಂಡಿರುವ ವಿವಿ ಆಡಳಿತವನ್ನು ಹಲವು ಮಂದಿ ಶಿಕ್ಷಣ ತಜ್ಞರು ಟೀಕಿಸಿದ್ದಾರೆ.
ಕೆಲ ದಲಿತ ಉಪನ್ಯಾಸಕರು ಜತೆ ಸೇರಿ 2022ರ ಫೆಬ್ರುವರಿಯಲ್ಲಿ ಕ್ಯಾಂಪಸ್ನಲ್ಲಿ ಅಂಬೇಡ್ಕರ್ ಸ್ಟಡಿ ಸರ್ಕರ್ ಇಂಡಿಯಾ ಎಂಬ ಅನೌಪಚಾರಿಕ ಸಂಘಟನೆ ಆರಂಭಿಸಿದ್ದರು. ಪ್ರತಿ ಗುರುವಾರ ಇವರು ಅಂಬೇಡ್ಕರ್ ಪ್ರತಿಮೆ ಮುಂದೆ ಸಮಾವೇಶಗೊಂಡು ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದ ಅವರ ಸಂಗ್ರಹಿತ ಕೃತಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು.
ಕಳೆದ ಎರಡು ವರ್ಷಗಳಲ್ಲಿ ಇಂಥ 61 ಸೆಷನ್ಗಳು ನಡೆದಿದ್ದವು. ಹಂಗಾಮಿ ಕುಲಸಚಿವ ಧರ್ವೇಶ್ ಕಠೇರಿಯಾ ಅವರ ಆದೇಶದ ಹಿನ್ನೆಲೆಯಲ್ಲಿ ಈ ಜನವರಿಯಿಂದ ಇದನ್ನು ಸ್ಥಗಿತಗೊಳಿಸಲಾಗಿತ್ತು.