ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆಯಲ್ಲಿ ಅಸಮಂಜಸ ಜಾತಿ ಅನುಪಾತ: ಉನ್ನತ ನ್ಯಾಯಾಂಗದಲ್ಲಿ ಮೀಸಲಾತಿಗೆ ರಾಜ್ಯಸಭಾ ಸದಸ್ಯ ವಿಲ್ಸನ್ ಆಗ್ರಹ
ಕಳೆದ ಆರು ವರ್ಷಗಳಲ್ಲಿ ಹೈಕೋರ್ಟ್ ಗೆ ನೇಮಕವಾದ 661 ನ್ಯಾಯಾಧೀಶರಲ್ಲಿ ಶೇ.75ಕ್ಕೂ ಹೆಚ್ಚಿನವರು ಸಾಮಾನ್ಯ ವರ್ಗದವರು
ಡಿಎಂಕೆ ಸದಸ್ಯ ಪಿ.ವಿಲ್ಸನ್ | PC : X | @PWilsonDMK
ಹೊಸದಿಲ್ಲಿ: ಕಳೆದ ಆರು ವರ್ಷಗಳಲ್ಲಿ ಒಟ್ಟು 661 ಹೈಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದ್ದು, ಈ ಪೈಕಿ ಶೇ.75ಕ್ಕೂ ಹೆಚ್ಚಿನವರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಸರಕಾರವು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರಲ್ಲಿ ಎಸ್ಸಿ/ಎಸ್ಟಿಗಳು ಮತ್ತು ಒಬಿಸಿಗಳಂತಹ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಕಳಪೆ ಪ್ರಾತಿನಿಧ್ಯವು ಉನ್ನತ ನ್ಯಾಯಾಂಗದಲ್ಲಿ ಮೀಸಲಾತಿಗೆ ಆಗ್ರಹಿಸಲು ಡಿಎಂಕೆ ಸದಸ್ಯ ಪಿ.ವಿಲ್ಸನ್ ಅವರನ್ನು ಪ್ರೇರೇಪಿಸಿತ್ತು.
ಕಾನೂನು ಸಚಿವ ಅರ್ಜುನ ರಾಮ ಮೇಘ್ವಾಲ್ ಅವರು ಡಿಎಂಕೆ ಸದಸ್ಯ ಪಿ.ವಿಲ್ಸನ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡರು.
ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಗಳಲ್ಲಿ ಸಾಮಾಜಿಕ ವೈವಿಧ್ಯತೆಯನ್ನು ಖಚಿತಪಡಿಸಲು ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎನ್ನುವುದನ್ನು ಮತ್ತು ದೇಶದಲ್ಲಿ ಸರ್ವೋಚ್ಚ ನ್ಯಾಯಾಲಯದ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸುವ ಕಾರ್ಯಸಾಧ್ಯತೆಯನ್ನು ತಿಳಿದುಕೊಳ್ಳಲು ವಿಲ್ಸನ್ ಬಯಸಿದ್ದರು.
ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರನ್ನು ಕೊಲಿಜಿಯಂ ವ್ಯವಸ್ಥೆಯ ಮೂಲಕ ನೇಮಕ ಮಾಡಲಾಗುತ್ತದೆ. ಕೊಲಿಜಿಯಂ ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡುತ್ತದೆ ಮತ್ತು ಸರಕಾರವು ಅವುಗಳನ್ನು ಅನುಮೋದಿಸುತ್ತದೆ. ಇಂತಹ ನೇಮಕಾತಿಗಳಲ್ಲಿ ಯಾವುದೇ ಮೀಸಲಾತಿಯಿಲ್ಲ.
2018ರಿಂದ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಲ್ಪಟ್ಟವರು ನಿಗದಿತ ನಮೂನೆಯಲ್ಲಿ ತಮ್ಮ ಸಾಮಾಜಿಕ ಹಿನ್ನೆಲೆಗೆ ಸಂಬಂಧಿಸಿದ ವಿವರಗಳನ್ನು ಒದಗಿಸುವುದು ಅಗತ್ಯವಾಗಿದೆ. ಹೀಗಾಗಿ 2018ರಿಂದ ನೇಮಕಗೊಂಡವರ ಮಾಹಿತಿ ಲಭ್ಯವಿದೆ. 2018ರಿಂದ 2024 ಜು.22ರವರೆಗೆ ನೇಮಕಗೊಂಡ 661 ಹೈಕೋರ್ಟ್ ನ್ಯಾಯಾಧೀಶರಲ್ಲಿ 21 ಎಸ್ಸಿ,12 ಎಸ್ಟಿ,78 ಒಬಿಸಿ ಮತ್ತು 499 ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ಸರಕಾರವು ಒದಗಿಸಿರುವ ಉತ್ತರದಲ್ಲಿಯ ಅಂಕಿಅಂಶಗಳು ಸಮಂಜಸವಾಗಿಲ್ಲ. ಹೊಸದಾಗಿ ನೇಮಕಗೊಂಡ ನ್ಯಾಯಾಧೀಶರ ಪೈಕಿ ಶೇ.3.17 ಎಸ್ಸಿ.ಶೇ.11.8 ಒಬಿಸಿ ಮತ್ತು ಶೇ.1.81ರಷ್ಟು ಎಸ್ಟಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಲ್ಸನ್ ಹೇಳಿದರು.