ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಅನರ್ಹಗೊಂಡ ಸಂಸದ ಮುಹಮ್ಮದ್ ಫೈಝಲ್
ಮುಹಮ್ಮದ್ ಫೈಝಲ್| Photo: PTI
ಹೊಸದಿಲ್ಲಿ: ಹತ್ಯೆ ಯತ್ನ ಪ್ರಕರಣದಲ್ಲಿ ತನ್ನನ್ನು ದೋಷಿ ಎಂದು ಕೆಳ ನ್ಯಾಯಾಲಯ ನೀಡಿದ ತೀರ್ಪು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿ ಕೇರಳ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಎನ್ಸಿಪಿ ನಾಯಕ ಮುಹಮ್ಮದ್ ಫೈಝಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಉಚ್ಚ ನ್ಯಾಯಾಲಯದ ಅಕ್ಟೋಬರ್ 3ರ ಆದೇಶದ ಬಳಿಕ ಮುಹಮ್ಮದ್ ಫೈಝಲ್ ಅವರು ಲೋಕಸಭೆಯ ಸದಸ್ಯತ್ವದಿಂದ ಬುಧವಾರ ಅನರ್ಹಗೊಂಡಿದ್ದರು.
‘‘ಕೇರಳದ ಗೌರವಾನ್ವಿತ ಉಚ್ಚ ನ್ಯಾಯಾಲಯದ ದಿನಾಂಕ 03.10.2023ರ ಆದೇಶದ ದೃಷ್ಟಿಯಿಂದ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಮುಹಮ್ಮದ್ ಫೈಝಲ್ ಪಿ.ಪಿ. ಅವರನ್ನು ಲೋಕಸಭೆಯ ಸದಸ್ಯತ್ವದಿಂದ, ಅವರ ಶಿಕ್ಷೆಯ ದಿನಾಂಕವಾದ 11 ಜನವರಿ 2023ರಿಂದ ಅನರ್ಹಗೊಳಿಸಲಾಗಿದೆ’’ ಎಂದು ಲೋಕಸಭೆಯ ಸೆಕ್ರೇಟರಿಯೇಟ್ ಬುಲೆಟಿನ್ ಹೇಳಿದೆ.
2009ರ ಲೋಕಸಭಾ ಚುನಾವಣೆ ಸಂದರ್ಭ ದಿವಂಗತ ಕೇಂದ್ರ ಸಚಿವ ಪಿ.ಎಂ. ಸಯೀದ್ ಅವರ ಅಳಿಯ ಮುಹಮ್ಮದ್ ಸಾಲಿಹ್ ಅವರನ್ನು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಲಕ್ಷದ್ವೀಪದ ಸೆಷನ್ಸ್ ನ್ಯಾಯಾಲಯ ಜನವರಿ 11ರಂದು ಫೈಝಲ್ ಹಾಗೂ ಇತರ ಮೂವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು ಮತ್ತು ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಫೈಝಲ್ ಅವರು ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯ ಅವರ ಅಪರಾಧವನ್ನು ರದ್ದುಗೊಳಿಸಲು ನಿರಾಕರಿಸಿತ್ತು. ಆದರೆ, ಫೈಝಲ್ ಹಾಗೂ ಇತರ ಮೂವರಿಗೆ ವಿಧಿಸಲಾಗಿದ್ದ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಿತ್ತು.