2021ರಲ್ಲಿ ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳಿಂದ ಭಾರತದಲ್ಲಿ ಪ್ರತಿ ದಿನ 464 ಮಕ್ಕಳ ಸಾವು: ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸ್ಟೇಟ್ ಆಫ್ ಗ್ಲೋಬಲ್ ಏರ್ 2024 ರಿಪೋರ್ಟ್ ಪ್ರಕಾರ 2021ರಲ್ಲಿ ಭಾರತದಲ್ಲಿ ಐದು ವರ್ಷಗಳ ಒಳಗಿನ 1,69,400 ಮಕ್ಕಳ ಸಾವುಗಳಿಗೆ ವಾಯುಮಾಲಿನ್ಯ ಕಾರಣವಾಗಿತ್ತು. ಅಂದರೆ ಆ ವರ್ಷ ಭಾರತದಲ್ಲಿ ಪ್ರತಿ ದಿನ ಸುಮಾರು 464 ಮಕ್ಕಳು ವಾಯುಮಾಲಿನ್ಯದಿಂದ ಉಂಟಾದ ಕಾಯಿಲೆಗಳಿಂದ ಮೃತಪಟ್ಟಿದ್ದರು.
ವರದಿಯು ವಿಶ್ವಾದ್ಯಂತ ದೇಶಗಳಿಗೆ ವಾಯು ಗುಣಮಟ್ಟ ಮತ್ತು ಆರೋಗ್ಯ ಪರಿಣಾಮಗಳ ದತ್ತಾಂಶಗಳ ವಿಶ್ಲೇಷಣೆಯನ್ನು ಒದಗಿಸಿದೆ. ವರದಿಯು ವಾಯುಮಾಲಿನ್ಯವನ್ನು ಕಣಗಳು ಮತ್ತು ವಿಭಿನ್ನ ಅನಿಲಗಳನ್ನೊಳಗೊಂಡ ಸಂಕೀರ್ಣ ಮಿಶ್ರಣವೆಂದು ವ್ಯಾಖ್ಯಾನಿಸಿದೆ. ಇದರ ಮೂಲಗಳು ಮತ್ತು ಸಂಯೋಜನೆ ಸ್ಥಳ ಹಾಗೂ ಸಮಯವನ್ನು ಅನುಸರಿಸಿ ಬದಲಾಗುತ್ತಿರುತ್ತದೆ.
ವರದಿಯು ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮ್ಯಾಟ್ರಿಕ್ಸ್ ಆ್ಯಂಡ್ ಇವ್ಯಾಲ್ಯುಯೇಷನ್ ನಡೆಸಿದ್ದ ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್,ಇಂಜ್ಯುರೀಸ್ ಆ್ಯಂಡ್ ರಿಸ್ಕ್ ಫ್ಯಾಕ್ಟರ್ಸ್ ಸ್ಟಡಿ 2021ನ್ನು ಉಲ್ಲೇಖಿಸಿ ಅಕಾಲಿಕ ಸಾವುಗಳ ಸಂಖ್ಯೆಯನ್ನು ಅಂದಾಜಿಸಿದೆ. ಗ್ಲೊಬಲ್ ಬರ್ಡನ್ ಆಫ್ ಡಿಸೀಸಸ್ ಅಧ್ಯಯನದಲ್ಲಿ ವಾಯುಮಾಲಿನ್ಯವನ್ನು ಪ್ರಮಾಣೀಕರಿಸಲು ಪಿಎಂ2.5,ನೈಟ್ರೋಜನ್ ಡೈಯಾಕ್ಸೈಡ್ ಮತ್ತು ಓರೆನ್ನಂತಹ ಸೂಚಕಗಳನ್ನು ಬಳಸಲಾಗುತ್ತದೆ.
2021ರಲ್ಲಿ ವಾಯುಮಾಲಿನ್ಯವು ಸಾವಿಗೆ ಕಾರಣವಾದ ಎರಡನೇ ಅಪಾಯಕಾರಿ ಅಂಶವಾಗಿತ್ತು ಮತ್ತು ಅದು ಐದು ವರ್ಷದೊಳಗಿನ ಮಕ್ಕಳು ಸೇರಿದಂತೆ ಜಾಗತಿಕವಾಗಿ 81 ಲ.ಸಾವುಗಳಿಗೆ ಕಾರಣವಾಗಿತ್ತು ಎಂದು ಸ್ಟೇಟ್ ಆಫ್ ಗ್ಲೋಬಲ್ ಏರ್ ರಿಪೋರ್ಟ್ ಹೇಳಿದೆ.
ಹೃದ್ರೋಗ,ಪಾರ್ಶ್ವವಾಯು,ಮಧುಮೇಹ,ಶ್ವಾಸಕೋಶ ಕ್ಯಾನ್ಸರ್ ಮತ್ತು ದೀರ್ಘಕಾಲಿಕ ಪ್ರತಿರೋಧಕ ಶ್ವಾಸಕೋಶ ಕಾಯಿಲೆ (ಸಿಒಪಿಡಿ) ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು ವಾಯುಮಾಲಿನ್ಯದಿಂದಾಗಿ ಉಂಟಾಗುವ ರೋಗಗಳಲ್ಲಿ ಸುಮಾರು ಶೇ.90ರಷ್ಟು ಪಾಲನ್ನು ಹೊಂದಿವೆ.
ವರದಿಯ ಪ್ರಕಾರ ಐದು ವರ್ಷಕ್ಕಿಂತ ಕೆಳಗಿನ ವಯೋಗುಂಪಿನಲ್ಲಿ 7,00,000ಕ್ಕೂ ಅಧಿಕ ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿದ್ದವು. ಇದು ವಿಶ್ವಾದ್ಯಂತ ಐದು ವರ್ಷಗಳ ಕೆಳಗಿನ ಮಕ್ಕಳ ಒಟ್ಟು ಸಾವುಗಳ ಶೇ.15ರಷ್ಟಿತ್ತು.
ಜೀವನ ಗುಣಮಟ್ಟ,ಔಷಧಿಗಳ ವೆಚ್ಚ,ಶಾಲಾದಿನಗಳ ನಷ್ಟ ಮತ್ತು ಆಗಾಗ್ಗೆ ಆಸ್ಪತ್ರೆಗಳಿಗೆ ಭೇಟಿಗೆ ಸಂಬಂಧಿಸಿದಂತೆ ವಾಯುಮಾಲಿನ್ಯ ಪರಿಣಾಮಗಳು ಮಕ್ಕಳು,ಅವರ ಕುಟುಂಬಗಳು ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಗಣನೀಯ ಸಾಮಾಜಿಕ ಮತ್ತು ಆರ್ಥಿಕ ಹೊರೆಗಳನ್ನು ಹೇರುತ್ತವೆ ಎಂದು ತಿಳಿಸಿರುವ ವರದಿಯು,ಸಂಚಾರ ಸಂಬಂಧಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಮಕ್ಕಳು ಅಸ್ತಮಾಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ನೈಟ್ರೋಜನ್ ಡೈಯಾಕ್ಸೈಡ್ ಮಕ್ಕಳಲ್ಲಿ ಅಸ್ತಮಾ ಉಂಟಾಗುವುದಕ್ಕೆ ಪ್ರಮುಖ ಕಾರಣವಾಗಿರುವ ವಾಯು ಮಾಲಿನ್ಯಕಾರಕವಾಗಿದೆ. ಅಸ್ತಮಾದಿಂದಾಗಿ ಮಕ್ಕಳ ಆರೋಗ್ಯ ವರ್ಷಗಳ ಕಾಲ ಹದಗೆಡುತ್ತಿರುತ್ತದೆ ಎಂದು ಹೇಳಿದೆ.