ದಿಲ್ಲಿ ವಾಯು ಮಾಲಿನ್ಯ: ದೀಪಾವಳಿ ಹಬ್ಬದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಸುರಕ್ಷತಾ ಮಿತಿಗಿಂತ 14 ಪಟ್ಟು ಹೆಚ್ಚಳ
PC : PTI
ಹೊಸದಿಲ್ಲಿ: ಶುಕ್ರವಾರ ಬೆಳಿಗ್ಗೆ ದಿಲ್ಲಿಯ ವಾಯುಮಾಲಿನ್ಯವು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ)ಯು ಸೂಚಿಸಿರುವ ಸುರಕ್ಷತಾ ಮಿತಿಗಿಂತ ಸುಮಾರು 14 ಪಟ್ಟು ಹೆಚ್ಚಾಗಿತ್ತು ಎಂದು ವರದಿಯಾಗಿದೆ.
ಪಟಾಕಿಗಳನ್ನು ನಿಷೇಧಿಸಲಾಗಿದ್ದರೂ ದಿಲ್ಲಿಗರು ಇದನ್ನು ಲೆಕ್ಕಿಸಿಯೇ ಇಲ್ಲ. ದೀಪಾವಳಿ ಅಂಗವಾಗಿ ಗುರುವಾರ ರಾತ್ರಿ ನಗರದಾದ್ಯಂತ ಭಾರೀ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಗಿತ್ತು. ಗುರುವಾರ ದಿಲ್ಲಿಯು ಮೂರು ವರ್ಷಗಳಲ್ಲಿ ಅತ್ಯಂತ ಕಲುಷಿತ ದೀಪಾವಳಿಯನ್ನು ದಾಖಲಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳಂತೆ ಶುಕ್ರವಾರ ಬೆಳಿಗ್ಗೆ ದಿಲ್ಲಿಯಲ್ಲಿ ಪಿಎಂ2.5 ಕಣಗಳ ಸರಾಸರಿ ಸಾಂದ್ರತೆಯು 209.3 μg/m3 ಗಳಷ್ಟಿತ್ತು.
ಪಿಎಂ2.5 0025 ಮಿಮೀ.ಗೂ ಕಡಿಮೆ ಅಗಲದ ಉಸಿರಾಡಬಲ್ಲ ವಾಯು ಕಣಗಳನ್ನು ಸೂಚಿಸುತ್ತದೆ.
ಭಾರತದ ನ್ಯಾಷನಲ್ ಆ್ಯಂಬಿಯಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ಸ್ ಸರಾಸರಿ 24 ಗಂಟೆಗಳಲ್ಲಿ ಪಿಎಂ2.5 60 μg/m3 ಸಾಂದ್ರತೆಯು ಸುರಕ್ಷಿತವೆಂದು ಸೂಚಿಸಿದೆ. ಡಬ್ಲ್ಯುಎಚ್ಒ ಪ್ರಕಾರ 15 μg/m3 ಸ್ವೀಕಾರಾರ್ಹ ಮಿತಿಯಾಗಿದೆ.
ಶುಕ್ರವಾರ ದಿಲ್ಲಿಯಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯವು ‘ಅತ್ಯಂತ ಕಳಪೆ ’ವರ್ಗದಲ್ಲಿ ದಾಖಲಾಗಿದ್ದು,ಬೆಳಿಗ್ಗೆ ಒಂಭತ್ತು ಗಂಟೆಗೆ 362 ಇತ್ತು. ಗುರುವಾರ ಇದು 330 ಆಗಿತ್ತು. 2023ರ ದೀಪಾವಳಿ ದಿನದಂದು ಸೂಚ್ಯಂಕ 218 ಮತ್ತು 2022ರಲ್ಲಿ 312 ಆಗಿತ್ತು.
ಅ.14ರಂದು ದಿಲ್ಲಿ ಸರಕಾರವು ಜ.1ರವರೆಗೆ ನಗರದಲ್ಲಿ ಪಟಾಕಿಗಳ ಬಳಕೆಯನ್ನು ನಿಷೇಧಿಸಿ ಆದೇಶಿಸಿತ್ತು. ಈ ಹಿಂದಿನ ವರ್ಷಗಳಲ್ಲಿಯೂ ಇಂತಹುದೇ ನಿಷೇಧಗಳನ್ನು ಹೇರಲಾಗಿತ್ತು ಮತ್ತು ದಿಲ್ಲಿಗರು ತಪ್ಪದೆ ಅವುಗಳನ್ನು ಉಲ್ಲಂಘಿಸಿದ್ದರು.