ನೀಟ್ ಕುರಿತು ಎನ್ಟಿಎಯನ್ನು ದೂಷಿಸಿದ ಡಿಎಂಕೆ | ‘ಮೂಕಪ್ರೇಕ್ಷಕ’ನಾಗಿರುವ ಸರಕಾರದ ವಿರುದ್ಧ ದಾಳಿ
PC : PTI
ಚೆನ್ನೈ : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಎಟಿ)ಯು ನೀಟ್ ಪರೀಕ್ಷೆಯ ಪಾವಿತ್ರ್ಯವನ್ನು ಹಾಳುಗೆಡವಿದೆ ಎಂದು ಆರೋಪಿಸಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ,‘ಮೂಕಪ್ರೇಕ್ಷಕ’ನಾಗಿರುವುದಕ್ಕಾಗಿ ಮತ್ತು ಕೋಟ್ಯಂತರ ರೂ.ಗಳನ್ನು ದೋಚುತ್ತಿರುವ ಕೋಚಿಂಗ್ ಸೆಂಟರ್ಗಳ ಬೆನ್ನಿಗೆ ನಿಂತಿರುವುದಕ್ಕಾಗಿ ಕೇಂದ್ರದ ವಿರುದ್ಧ ಹರಿಹಾಯ್ದಿದೆ. ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪುನರುಚ್ಚರಿಸಿರುವ ಡಿಎಂಕೆ, ಅದೊಂದೇ ಶಿಕ್ಷಣ ಕ್ಷೇತ್ರದ ಪಾವಿತ್ರ್ಯವನ್ನು ರಕ್ಷಿಸುತ್ತದೆ ಎಂದು ಹೇಳಿದೆ.
1,563 ವಿದ್ಯಾರ್ಥಿಗಳಿಗೆ ನೀಡಲಾಗಿರುವ ಕೃಪಾಂಕಗಳನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿರುವ ಡಿಎಂಕೆಯ ಮುಖವಾಣಿ ‘ಮುರಸೋಳಿ’ಯ ಜೂ.15ರ ಸಂಚಿಕೆಯಲ್ಲಿನ ಸಂಪಾದಕೀಯ ಲೇಖನವು, ವಿಷಯವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ಯದಿದ್ದರೆ ಬಿಜೆಪಿ ಸರಕಾರವು ಈ ಕ್ರಮವನ್ನು ತೆಗೆದುಕೊಳ್ಳುತ್ತಿರಲಿಲ್ಲ. ನೀಟ್ ಪರೀಕ್ಷೆಗಳು ಆರಂಭಗೊಂಡಾಗಿನಿಂದಲೂ ಹಲವಾರು ಅವ್ಯವಹಾರಗಳು ನಡೆಯುತ್ತಲೇ ಇವೆ ಮತ್ತು ಬಿಜೆಪಿ ಸರಕಾರವು ಅವುಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ ಎಂದು ಹೇಳಿದೆ.
‘ನೀಟ್ ಪರೀಕ್ಷೆಯಲ್ಲಿ ಈವರೆಗೆ ಗುಪ್ತವಾಗಿ ನಡೆಯುತ್ತಿದ್ದ ಅವ್ಯವಹಾರಗಳು ಮತ್ತು ಹಗರಣಗಳು ಈ ವರ್ಷ ಬಹಿರಂಗವಾಗಿಯೇ ನಡೆದಿವೆ. ಇದನ್ನು ಮರೆಮಾಚಲೆಂದೇ ಜೂ.14ರಂದು ಬಿಡುಗಡೆಗೊಳ್ಳಬೇಕಿದ್ದ ನೀಟ್ ಫಲಿತಾಂಶಗಳನ್ನು ಹಿಂದೂಡಿ ಚುನಾವಣಾ ಫಲಿತಾಂಶಗಳು ಘೋಷಣೆಯಾದ ಜೂ.4ಕ್ಕೆ ಪ್ರಕಟಿಸಲಾಗಿತ್ತು. ಆದಾಗ್ಯೂ ಹಗರಣವು ಬಹಿರಂಗಗೊಂಡಿದೆ. ಕೃಪಾಂಕಗಳ ಬಗ್ಗೆ ನಾವು ಕೇಳಿದ್ದೇವೆ, ಒಂದೋ ಎರಡೋ ಕೃಪಾಂಕಗಳನ್ನು ನೀಡಲಾಗುತ್ತದೆ. ಆದರೆ 70-80 ಅಂಕಗಳನ್ನು ಕೃಪಾಂಕಗಳೆಂದು ಕರೆಯಲು ಹೇಗೆ ಸಾಧ್ಯ? ಎನ್ಟಿಎ ಸಂಪೂರ್ಣ ಅಂಕಗಳನ್ನು ನೀಡಿದೆ. ಇದು ರಾಷ್ಟ್ರೀಯ ಅನ್ಯಾಯವಾಗಿದೆ. ಬಿಜೆಪಿ ಸರಕಾರವು ಪ್ರತಿ ತಿಂಗಳು ಕೋಟಿಗಟ್ಟಲೆ ರೂ.ಗಳನ್ನು ಗಳಿಸಿರುವ ಕೋಚಿಂಗ್ ಸೆಂಟರ್ಗಳ ಬೆನ್ನಿಗೆ ನಿಂತಿದೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿಯೂ ಕಾರ್ಪೊರೇಟ್ ಸಂಸ್ಕೃತಿಯನ್ನು ಹುಟ್ಟು ಹಾಕಿದೆ’ ಎಂದು ಸಂಪಾದಕೀಯವು ಹೇಳಿದೆ.
‘ಆರಂಭದಿಂದಲೂ ತಮಿಳುನಾಡು ಮತ್ತು ಡಿಎಂಕೆ ಸೇರಿದಂತೆ ರಾಜಕೀಯ ಪಕ್ಷಗಳು ನೀಟ್ ಪರೀಕ್ಷೆಯನ್ನು ವಿರೋಧಿಸುತ್ತಲೇ ಬಂದಿವೆ. ಪರೀಕ್ಷೆಯ ವ್ಯಾಪ್ತಿಯಿಂದ ರಾಜ್ಯಕ್ಕೆ ವಿನಾಯಿತಿ ನೀಡುವಂತೆ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ನಮ್ಮ ಬಲವಾದ ವಿರೋಧವನ್ನು ಕೇವಲ ರಾಜಕೀಯ ಎಂದು ಹೆಸರಿಸಿ ಬಿಜೆಪಿ ಸರಕಾರವು ಅದನ್ನು ತಿರಸ್ಕರಿಸಿತ್ತು. ಆದರೆ ಇಂದು ನೀಟ್ ಪರೀಕ್ಷೆಯಲ್ಲಿನ ವಂಚನೆಗಳು ವಿದ್ಯಾರ್ಥಿಗಳಿಗೆ ಸ್ವತಃ ಅರಿವಾಗಿದೆ ಮತ್ತು ಮೇ 5ರ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಮತ್ತು ಅಕ್ರಮಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೋರಿ ಪೀಡಿತ ವಿದ್ಯಾರ್ಥಿಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನೀಟ್ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿದೆ ಎಂದು ಸ್ವತಃ ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ. ಪಾವಿತ್ರ್ಯವನ್ನು ಹಾಳು ಮಾಡಿದ್ದು ಯಾರು? ಅದು ಎನ್ಟಿಎ ಮತ್ತು ಕೇಂದ್ರದ ಬಿಜೆಪಿ ಸರಕಾರವು ಮೂಕಪ್ರೇಕ್ಷಕನಾಗಿತ್ತು ಎಂದು ಲೇಖನವು ಜರಿದಿದೆ.