ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾದ ಡಿಎಂಕೆ ಸಂಸದ ಗಣೇಶ್ ಮೂರ್ತಿ ಆಸ್ಪತ್ರೆಯಲ್ಲಿ ನಿಧನ
ಎ.ಗಣೇಶ್ ಮೂರ್ತಿ (Photo: NDTV)
ಚೆನ್ನೈ: ಈರೋಡ್ ಸಂಸದ ಹಾಗೂ ಎಂಡಿಎಂಕೆಯ ಹಿರಿಯ ನಾಯಕ ಎ.ಗಣೇಶ್ ಮೂರ್ತಿ ಕೊಯಂಬತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಅವರು ಇಂದು ಮುಂಜಾನೆ 5 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಸಂಗತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ 76 ವರ್ಷದ ಗಣೇಶ್ ಮೂರ್ತಿಯನ್ನು ರವಿವಾರ ಮೊದಲಿಗೆ ಈರೋಡ್ ಹಾಗೂ ನಂತರ ಕೊಯಂಬತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಎಂಡಿಎಂಕೆ ಪಕ್ಷದ ವಕ್ತಾರರೊಬ್ಬರು, ಈ ಸಾಧ್ಯತೆಯ ಬಗ್ಗೆ ವೈದ್ಯರು ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರು. ವೈಕೊ ಕೊಯಂಬತ್ತೂರಿಗೆ ಧಾವಿಸುತ್ತಿದ್ದು, ಅವರು ಬೆಳಗ್ಗೆ 8 ಗಂಟೆ ವೇಳೆಗೆ ಆಗಮಿಸಬಹುದು ಎಂದು ಹೇಳಿದ್ದಾರೆ.
ಇದು ಆತ್ಮಹತ್ಯೆ ಪ್ರಯತ್ನದ ಪ್ರಕರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೂರು ಬಾರಿಯ ಸಂಸದರಾದ ಗಣೇಶ್ ಮೂರ್ತಿ, 2019ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಚಿಹ್ನೆಯಡಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು ಎಂಡಿಎಂಕೆ ಪಕ್ಷದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದರು. ಪೋಟಾ ಕಾಯ್ದೆಯಡಿ ಬಂಧಿತರಾಗಿದ್ದ ವೈಕೊ ಜೊತೆಗೆ ಗಣೇಶ್ ಮೂರ್ತಿ ಕೂಡಾ ಸೆರೆವಾಸ ಅನುಭವಿಸಿದ್ದರು.
ಇತ್ತೀಚೆಗೆ, ಎಂಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವೈಕೊ ಪುತ್ರ ದುರೈರನ್ನು ಈರೋಡ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದ್ದವು.