ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ: ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಚಿವ ಪೊನ್ಮುಡಿ ವಜಾ

ಕೆ. ಪೊನ್ಮುಡಿ (PTI)
ಚೆನ್ನೈ: ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ತಮಿಳುನಾಡು ಅರಣ್ಯ ಸಚಿವರೂ ಆದ ಡಿಎಂಕೆ ಪಕ್ಷದ ಹಿರಿಯ ನಾಯಕ ಕೆ. ಪೊನ್ಮುಡಿ ಅವರನ್ನು ಶುಕ್ರವಾರ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಡಿಎಂಕೆ ವಜಾಗೊಳಿಸಿದೆ.
ಶೈವ ಪಂಥ ಹಾಗೂ ವೈಷ್ಣವ ಪಂಥದ ಕುರಿತು ಪೊನ್ಮುಡಿ ಮಾಡಿದ ಭಾಷಣದ ವೇಳೆ, ಅವರು ಮಹಿಳೆಯರನ್ನುದ್ದೇಶಿಸಿ ನೀಡಿದ್ದ ಅವಹೇಳನಕಾರಿ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅರಣ್ಯ ಸಚಿವರೂ ಆದ ಪೊನ್ಮುಡಿಯ ಆ ಹೇಳಿಕೆಯನ್ನು ಅವರ ಪಕ್ಷದ ಸಹೋದ್ಯೋಗಿ ಹಾಗೂ ಡಿಎಂಕೆ ಸಂಸದೆ ಕನಿಮೋಳಿ ಖಂಡಿಸಿದ್ದರು.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಡಿಎಂಕೆ, ಪಕ್ಷದ ಅಧ್ಯಕ್ಷ ಸ್ಟಾಲಿನ್ ಅವರು ಪೊನ್ಮುಡಿಯನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿದ್ದಾರೆ ಎಂದು ಹೇಳಿದೆ. ಆದರೆ, ಈ ವಜಾಕ್ಕೆ ಕಾರಣವೇನು ಎಂದು ಆ ಪ್ರಕಟಣೆಯಲ್ಲಿ ಉಲ್ಲೇಖಿಸಿಲ್ಲ.
ಡಿಎಂಕೆ ಸರಕಾರದ ಅತ್ಯಂತ ಹಿರಿಯ ಸಚಿವರ ಪೈಕಿ ಒಬ್ಬರಾದ ಪೊನ್ಮುಡಿ, ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದಕ್ಕೆ ಕುಖ್ಯಾತರಾಗಿದ್ದಾರೆ. ಈ ಹಿಂದೆ ಉಚಿತ ಬಸ್ ಪ್ರಯಾಣ ಯೋಜನೆಯ ಲಾಭ ಪಡೆದ ಮಹಿಳೆಯರನ್ನು ಹೀಯಾಳಿಸಿದ ಕಾರಣಕ್ಕೂ ಅವರು ಸುದ್ದಿಯಾಗಿದ್ದರು.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ನಿಕಟವರ್ತಿಯಾದ ಪೊನ್ಮುಡಿ, ಮೂಲತಃ ಪ್ರಾಧ್ಯಾಪಕರಾಗಿದ್ದವರು. ನಂತರ, ರಾಜಕಾರಣಕ್ಕೆ ಪದಾರ್ಪಣೆ ಮಾಡಿದ್ದ ಅವರು, ಡಿಎಂಕೆಯ ಐವರು ಉಪ ಪ್ರಧಾನ ಕಾರ್ಯದರ್ಶಿಗಳ ಪೈಕಿ ಓರ್ವರಾಗಿದ್ದಾರೆ. ಸ್ಟಾಲಿನ್ ನೇತೃತ್ವದ ಸಚಿವ ಸಂಪುಟದಲ್ಲಿ ಅವರು ಆರನೆಯ ಜ್ಯೇಷ್ಠತೆ ಹೊಂದಿರುವ ಸಚಿವರೂ ಆಗಿದ್ದಾರೆ.